ಬೆಂಗಳೂರು: ರಕ್ಷಣಾ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರ ಪಿಂಚಣಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಡಿಜಿಟಲ್ ಜೀವಿತ ಪ್ರಮಾಣಪತ್ರ (DLC) ಸಲ್ಲಿಕೆಗೆ ನೆರವು ನೀಡುವ ಉದ್ದೇಶದಿಂದ ಬೆಂಗಳೂರಿನ ಪ್ರಿನ್ಸಿಪಾಲ್ ಕಂಟ್ರೋಲರ್ ಆಫ್ ಡಿಫೆನ್ಸ್ ಅಕೌಂಟ್ಸ್ (PCDA) ಕಚೇರಿಯು ನವೆಂಬರ್ 4 ಮತ್ತು 5ರಂದು ‘ಸ್ಪರ್ಶ್’ (SPARSH) ಔಟ್ರೀಚ್ ಕಾರ್ಯಕ್ರಮ ಆಯೋಜಿಸಿದೆ.
ರಕ್ಷಣಾ ಸಚಿವಾಲಯದ ಕಂಟ್ರೋಲರ್ ಜನರಲ್ ಆಫ್ ಡಿಫೆನ್ಸ್ ಅಕೌಂಟ್ಸ್ (CGDA) ನೇತೃತ್ವದಲ್ಲಿ ನಡೆಯುತ್ತಿರುವ ಡಿಜಿಟಲ್ ಜೀವಿತ ಪ್ರಮಾಣಪತ್ರ ಅಭಿಯಾನ 5.0ರ ಭಾಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಲೋವರ್ ಅಗಾರಂ ರಸ್ತೆಯಲ್ಲಿರುವ 107ನೇ ಸಂಖ್ಯೆಯ PCDA ಕಚೇರಿಯ ಬಹುಪಯೋಗಿ ಸಭಾಂಗಣದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಪಿಂಚಣಿದಾರರು ಸ್ಪರ್ಶ್ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಡಿಜಿಟಲ್ ಜೀವಿತ ಪ್ರಮಾಣಪತ್ರ ಸಲ್ಲಿಕೆ, ಪಿಂಚಣಿ ಸಂಬಂಧಿತ ವಿಚಾರಗಳು ಹಾಗೂ ಇತರ ತಾಂತ್ರಿಕ ಸಮಸ್ಯೆಗಳ ಕುರಿತು ತಜ್ಞರ ತಂಡ ಮಾರ್ಗದರ್ಶನ ನೀಡಲಿದೆ. ಇದರಿಂದ ಪಿಂಚಣಿದಾರರು ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅನುಕೂಲವಾಗಲಿದೆ.

ಕಾರ್ಯಕ್ರಮಕ್ಕೆ ಬರುವವರು ಮೂಲ ಪಿಂಚಣಿ ಪುಸ್ತಕ ಅಥವಾ ಡಿಸ್ಚಾರ್ಜ್ ಪುಸ್ತಕ, ಮಾಜಿ ಸೈನಿಕರ ಗುರುತಿನ ಚೀಟಿ, ಬ್ಯಾಂಕ್ ಪಾಸ್ಬುಕ್, ಪಿಂಚಣಿ ಪಾವತಿ ಆದೇಶ (PPO), ಆಧಾರ್ ಕಾರ್ಡ್, ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಫೋನ್, ಪ್ಯಾನ್ ಕಾರ್ಡ್ ಹಾಗೂ ಸಂಬಂಧಿತ ದಾಖಲೆಗಳನ್ನು ತರಬೇಕು. ಡಿಜಿಟಲ್ ಜೀವಿತ ಪ್ರಮಾಣಪತ್ರ ಸಲ್ಲಿಸುವಾಗ ಬಯೋಮೆಟ್ರಿಕ್ ಅಥವಾ OTP ದೃಢೀಕರಣಕ್ಕೆ ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಅಗತ್ಯವಿದೆ.
ಶಿಬಿರದಲ್ಲಿ ಭಾಗವಹಿಸಲು ಸಾಧ್ಯವಾಗದವರು ನವೆಂಬರ್ ತಿಂಗಳಿನಲ್ಲಿ ಸ್ಪರ್ಶ್ ಸೇವಾ ಕೇಂದ್ರಗಳ ಮೂಲಕವೂ ಡಿಜಿಟಲ್ ಜೀವಿತ ಪ್ರಮಾಣಪತ್ರ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಅಥವಾ ನೆರವಿಗಾಗಿ 8147527246 ಸಂಖ್ಯೆಯ ಸಹಾಯವಾಣಿ ಅಥವಾ ವಾಟ್ಸ್ಆ್ಯಪ್ ಮೂಲಕ ಸಂಪರ್ಕಿಸಬಹುದು. ಈ ಸೌಲಭ್ಯವನ್ನು ಬಳಸಿಕೊಂಡು ಪಿಂಚಣಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ PCDA ಬೆಂಗಳೂರು ಕಚೇರಿ ಮನವಿ ಮಾಡಿದೆ.
















































































