ಬೆಂಗಳೂರು: ಜೈವಿಕ ಇಂಧನ ಉತ್ಪಾದನೆ, ಹಸಿರು ತಂತ್ರಜ್ಞಾನ ಅಳವಡಿಕೆ ಮತ್ತು ಸುಸ್ಥಿರ ಇಂಧನ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕರ್ನಾಟಕ ಹಾಗೂ ಚೀನಾ ನಡುವೆ ಸಹಕಾರ ವಿಸ್ತರಿಸುವ ಕುರಿತು ಚರ್ಚೆ ನಡೆದಿದೆ. ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ (KSBDB) ಅಧ್ಯಕ್ಷ ಎಸ್. ಈ. ಸುಧೀಂದ್ರ ಅವರು ಅಕ್ಟೋಬರ್ 22ರಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತದಲ್ಲಿನ ಚೀನಾ ರಾಯಭಾರಿ ಕ್ಸು ಫೀಹಾಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ವಿಮಾನ ನಿಲ್ದಾಣದ ವಿಐಪಿ ಲೌಂಜ್ನಲ್ಲಿ ನಡೆದ ಸಭೆಯಲ್ಲಿ, ರಾಜ್ಯದಲ್ಲಿ ಕೃಷಿ ತ್ಯಾಜ್ಯ ಮತ್ತು ಜೈವಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಎಥೆನಾಲ್ ಹಾಗೂ ಬಯೋಡೀಸೆಲ್ ಉತ್ಪಾದನೆ ಹೆಚ್ಚಿಸುವ ಅವಕಾಶಗಳ ಕುರಿತು ಸುಧೀಂದ್ರ ವಿವರಿಸಿದರು. ಜೈವಿಕ ಇಂಧನ ಮತ್ತು ನವೀಕರಿಸಬಹುದಾದ ಇಂಧನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಚೀನಾದ ಪರಿಣತಿಯನ್ನು ಬಳಸಿಕೊಂಡು ಜಂಟಿ ಸಂಶೋಧನೆ ಹಾಗೂ ಉದ್ಯಮ ಸ್ಥಾಪನೆಗೆ ಕರ್ನಾಟಕ ಆಸಕ್ತಿ ಹೊಂದಿದೆ ಎಂದು ತಿಳಿಸಿದರು.

ಕರ್ನಾಟಕದ ಹಸಿರು ಇಂಧನ ಉಪಕ್ರಮಗಳನ್ನು ಶ್ಲಾಘಿಸಿದ ಚೀನಾ ರಾಯಭಾರಿ, ತಾಂತ್ರಿಕ ನೆರವು, ಜ್ಞಾನ ವಿನಿಮಯ ಮತ್ತು ಪರಿಸರಸ್ನೇಹಿ ಇಂಧನ ಯೋಜನೆಗಳಲ್ಲಿ ಸಹಕಾರದ ಸಾಧ್ಯತೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.
ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಅನುರಾಧಾ ಹಾಗೂ ಮಂಡಳಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇತ್ತೀಚೆಗೆ ಬಲ್ಗೇರಿಯಾ ಮತ್ತು ಜಪಾನ್ನ ಸಂಸ್ಥೆಗಳೊಂದಿಗೂ ಸಹಕಾರ ಕುರಿತು ಚರ್ಚೆ ನಡೆಸಿದ್ದ ಮಂಡಳಿಯು, ಇದೀಗ ಚೀನಾದೊಂದಿಗೆ ಮಾತುಕತೆ ನಡೆಸುವ ಮೂಲಕ ಕರ್ನಾಟಕದ ಜೈವಿಕ ಇಂಧನ ಕ್ಷೇತ್ರದಲ್ಲಿ ಜಾಗತಿಕ ಸಹಭಾಗಿತ್ವ ವಿಸ್ತರಿಸುವ ಪ್ರಯತ್ನ ಮುಂದುವರಿಸಿದೆ.
















































































