ಗದಗ, ಸೆ. 2: 2028ರಿಂದ ಮುಂದಿನ 8ರಿಂದ 10 ವರ್ಷಗಳ ಕಾಲ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ನೊಣವಿನಕೆರೆ ಅಜ್ಜಯ್ಯ ಭವಿಷ್ಯ ನುಡಿದಿದ್ದಾರೆ.
ಲಕ್ಷ್ಮೇಶ್ವರ ತಾಲೂಕಿನ ಮುಕ್ತಿ ಮಂದಿರಕ್ಕೆ ಬುಧವಾರ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಲಿಂಗೈಕ್ಯ ವೀರಗಂಗಾಧರ ಸ್ವಾಮಿಗಳ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸುಮಾರು ಅರ್ಧ ಗಂಟೆ ಪೂಜೆ-ಪ್ರಾರ್ಥನೆ ನಡೆಸಿದರು.

ಬಳಿಕ ಮಾತನಾಡಿದ ಡಿಕೆಶಿ, ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಬೇಕು ಎಂಬುದು ತಮ್ಮ ಪ್ರಾರ್ಥನೆಯಾಗಿದೆ ಎಂದರು. ಗದಗ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಹತ್ತಿ, ಮೆಣಸಿನಕಾಯಿ, ಕಡಲೆ ಸೇರಿದಂತೆ ಯಾವುದೇ ಬೆಳೆಗಳು ರೈತರ ಕೈಗೆ ಸಿಗುತ್ತಿಲ್ಲ ಎಂದು ಹೇಳಿದರು.
ಹೆಲಿಕಾಪ್ಟರ್‌ನಲ್ಲಿ ಗದಗಕ್ಕೆ ಆಗಮಿಸುವಾಗ ಹೊಲಗಳನ್ನು ಗಮನಿಸಿದ್ದು, ಬಹುತೇಕ ಜಮೀನುಗಳು ಖಾಲಿಯಾಗಿರುವುದು ಕಂಡುಬಂದಿದೆ. ಆಲಮಟ್ಟಿ ಹೊರತುಪಡಿಸಿ ಹೆಚ್ಚಿನ ಕಡೆ ನೀರಿನ ಸಮಸ್ಯೆ ಇದೆ. ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿ ಇದೆ ಎಂದು ತಿಳಿಸಿದರು.
ಮುಕ್ತಿ ಮಂದಿರ ತಮ್ಮ ಹೃದಯಕ್ಕೆ ಹತ್ತಿರವಾದ ಸ್ಥಳವಾಗಿದ್ದು, ವೀರಗಂಗಾಧರ ಅಜ್ಜನವರ ಐಕ್ಯ ಸ್ಥಳವಾಗಿದೆ. ಎಲ್ಲ ಧರ್ಮಗಳನ್ನೂ ಗೌರವಿಸಿ, ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಇದೇ ವೇಳೆ ಪೂಜೆ ಬಳಿಕ ಮಾತನಾಡಿದ ನೊಣವಿನಕೆರೆ ಅಜ್ಜಯ್ಯ, ಡಿ.ಕೆ. ಶಿವಕುಮಾರ್ ಅವರ ಆರೋಗ್ಯ, ಆಯುಷ್ಯ ಹಾಗೂ ಮುಂದಿನ ಅಭಿವೃದ್ಧಿಗಾಗಿ ವಿಶೇಷ ಸಂಕಲ್ಪ ಮಾಡಲಾಗಿದೆ ಎಂದರು.
2028ರಿಂದ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಆಳ್ವಿಕೆಯಲ್ಲಿ ಇರುವಂತೆ ಪೂಜೆ ಸಲ್ಲಿಸಲಾಗಿದೆ. ಮುಂದಿನ 8ರಿಂದ 10 ವರ್ಷಗಳ ಕಾಲ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಭವಿಷ್ಯ ನುಡಿದರು.






































































