ಬೌವಾರ್: ಮಧ್ಯ ಆಫ್ರಿಕಾದ ಗಣರಾಜ್ಯದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಚಿನ್ನದ ಗಣಿಯೊಂದು ಕುಸಿದು ಕನಿಷ್ಠ 100 ಮಂದಿ ಮೃತಪಟ್ಟಿರುವ ಭೀಕರ ಘಟನೆ ನಡೆದಿದೆ. ನೂರಾರು ಕುಶಲಕರ್ಮಿ ಗಣಿಗಾರರು ಕೆಲಸ ಮಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಕ್ಯಾಮರೂನ್ ಗಡಿಯಲ್ಲಿರುವ ಬಾಬುವಾ ಪಟ್ಟಣದಿಂದ ಸುಮಾರು 50 ಕಿ.ಮೀ. ದೂರದ ಝಂಬೋಯೆ ಗಣಿಗಾರಿಕೆ ಪ್ರದೇಶದಲ್ಲಿ ಘಟನೆ ನಡೆದಿದೆ. ಗಣಿ ಕುಸಿದ ಬಳಿಕ ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದು, ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಸ್ಥಳೀಯ ಗಣಿಗಾರ ಸೆಡ್ರಿಕ್ ಎಂಬಾಂಗೊ ಅವರ ಪ್ರಕಾರ, ಗಣಿಗಾರಿಕೆ ಪ್ರದೇಶದ ಒಂದು ಭಾಗ ಸಂಪೂರ್ಣವಾಗಿ ಕುಸಿದಿದ್ದು, ಹಲವರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಬದುಕುಳಿದ ಗಾಯಾಳುಗಳನ್ನು ಬಾಬುವಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಖರವಾಗಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.







































































