ಭುವನೇಶ್ವರ: ಒಡಿಶಾದ ಕೇಂದ್ರಪಾರ ಜಿಲ್ಲೆಯ ತಲ್ಚುವಾ ಮೆರೈನ್ ಪೊಲೀಸ್ ಠಾಣೆಯಲ್ಲಿ ವಿವಾಹಿತ ಮಹಿಳೆ ಮತ್ತು ಆಕೆಯ ಮಗನ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಐಐಸಿ ಸಂಧ್ಯಾರಾಣಿ ಜೇನಾ ಅವರನ್ನು ಅಮಾನತುಗೊಳಿಸಲಾಗಿದೆ.
ಗಿರಿಯಪಹಿ ಗ್ರಾಮದ ಅನ್ನಪೂರ್ಣ ಮಂಡಲ್ ಅವರು ಕುಟುಂಬ ಕಲಹದ ದೂರು ದಾಖಲಿಸಲು ಠಾಣೆಗೆ ತೆರಳಿದ್ದ ವೇಳೆ, ಐಐಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಹಿಳೆಯ ಕೂದಲನ್ನು ಹಿಡಿದು ಹೊಡೆದು, ಸಿಂಧೂರ ಒರೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆಯ ಮಗನ ಮೇಲೂ ಠಾಣೆಯೊಳಗೆ ಹಲ್ಲೆ ನಡೆಸಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ.
ಬಳಿಕ ಸಂತ್ರಸ್ತೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಎಸ್‌ಡಿಪಿಒ ಸುಕಾಂತ ಪಾತ್ರ ಅವರಿಗೆ ದೂರು ಸಲ್ಲಿಸಿದರು. ಪ್ರಕರಣದ ಹಿನ್ನೆಲೆ ಕೇಂದ್ರಪಾರ ಎಸ್‌ಪಿ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು.
ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಒಡಿಶಾ ಡಿಜಿಪಿ ವೈ.ಬಿ. ಖುರಾನಿಯಾ ಅವರು ಗಂಭೀರ ದುರ್ನಡತೆ ಮತ್ತು ಕರ್ತವ್ಯ ಲೋಪ ಆರೋಪದಡಿ ಸಂಧ್ಯಾರಾಣಿ ಜೇನಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ.
ಆದರೆ, ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ಜೇನಾ ತಳ್ಳಿಹಾಕಿದ್ದು, ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.























































