ತಿರುವನಂತಪುರಂ: ಸಿಪಿಐ(ಎಂ) ಹಿರಿಯ ನಾಯಕ ಹಾಗೂ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿವಾಸಕ್ಕೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬುಧವಾರ ಭೇಟಿ ನೀಡಿ ಸಿಎಂಆರ್‌ಎಲ್-ಎಕ್ಸಲಾಜಿಕ್ ಮಾಸಿಕ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಪಿಣರಾಯಿ ವಿಜಯನ್ ಪುತ್ರಿ ವೀಣಾ ವಿಜಯನ್ ಅವರ ಹೇಳಿಕೆಯನ್ನು ಇಡಿ ದಾಖಲಿಸಿದ್ದು, ಅವರ ಐಟಿ ಕಂಪನಿ ಎಕ್ಸಲಾಜಿಕ್ ಸೊಲ್ಯೂಷನ್ಸ್ ತನಿಖೆಯ ಕೇಂದ್ರಬಿಂದುವಾಗಿದೆ.
ಬೆಳಗ್ಗೆ ಸುಮಾರು 6 ಗಂಟೆ ವೇಳೆಗೆ ಇಡಿ ಅಧಿಕಾರಿಗಳು ತಿರುವನಂತಪುರಂನ ಬೇಕರಿ ಜಂಕ್ಷನ್ ಸಮೀಪದ ವಿಜಯನ್ ನಿವಾಸ ಸೇರಿ ಕೇರಳದ ವಿವಿಧ 10 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಸಿಎಂಆರ್‌ಎಲ್ ಕಚೇರಿಗಳು ಹಾಗೂ ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲೂ ದಾಳಿ ನಡೆದಿದೆ.
ಸಿಎಂಆರ್‌ಎಲ್ ಮತ್ತು ಎಕ್ಸಲಾಜಿಕ್ ನಡುವಿನ ಹಣಕಾಸು ವಹಿವಾಟಿನ ತನಿಖೆ ಮುಂದುವರಿಸಲು ಕೇರಳ ಹೈಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿದೆ.
ಡಿಜಿಟಲ್ ಸಾಧನಗಳು, ಹಣಕಾಸು ದಾಖಲೆಗಳು ಮತ್ತು ವಹಿವಾಟು ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಉಲ್ಲಂಘನೆಯ ಆಯಾಮದಲ್ಲೂ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪಿಣರಾಯಿ ವಿಜಯನ್ ಅವರನ್ನು ಇದುವರೆಗೆ ಅಧಿಕೃತವಾಗಿ ವಿಚಾರಣೆಗೆ ಒಳಪಡಿಸಿಲ್ಲ. ಆದರೆ ತನಿಖೆ ಮುಂದುವರಿದಂತೆ ಅವರ ಹೇಳಿಕೆಯನ್ನು ಸಹ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
























































