ಬೆಂಗಳೂರು: ಹಿರಿಯ ನಾಯಕ ಹಾಗೂ ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಾಜಕೀಯ ಕಣ ದಿನದಿಂದ ದಿನಕ್ಕೆ ಕಾವೇರಿಸುತ್ತಿದೆ. ಉಪಚುನಾವಣೆಯ ಅಧಿಕೃತ ಘೋಷಣೆಗೆ ಮುನ್ನವೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ತಂತ್ರ-ಪ್ರತಿತಂತ್ರಗಳು ಜೋರಾಗಿವೆ.
ಈ ನಡುವೆ ಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಬಿಜೆಪಿ ಸೇರ್ಪಡೆಯಾಗಿರುವುದು ಕ್ಷೇತ್ರದ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಹಿರಿಯೂರು ಕ್ಷೇತ್ರದಲ್ಲಿ ಪ್ರಭಾವಿ ಮತಬ್ಯಾಂಕ್ ಹೊಂದಿರುವ ಕಾಡುಗೊಲ್ಲ ಸಮುದಾಯವನ್ನು ಸೆಳೆಯಲು ಬಿಜೆಪಿ ವಿಶೇಷ ತಂತ್ರ ರೂಪಿಸಿದ್ದು, ಅದರ ಭಾಗವಾಗಿಯೇ ರಾಜಣ್ಣ ಅವರನ್ನು ಪಕ್ಷಕ್ಕೆ ಸೆಳೆಯಲಾಗಿದೆ ಎನ್ನಲಾಗುತ್ತಿದೆ.
ಇನ್ನೊಂದೆಡೆ ಮೈತ್ರಿ ಪಕ್ಷವಾದ ಜೆಡಿಎಸ್ ಸಹ ಹಿರಿಯೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಒಳಾಂಗಣ ಚರ್ಚೆ ಆರಂಭಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೈತ್ರಿ ಧರ್ಮದ ಆಧಾರದ ಮೇಲೆ ಜೆಡಿಎಸ್ ಸೀಟಿನ ಬೇಡಿಕೆ ಇಡುತ್ತಿದ್ದರೆ, ಬಿಜೆಪಿ ಮಾತ್ರ ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ತೊಡಗಿದೆ. ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವಹಿಸುವ ಕಾಡುಗೊಲ್ಲ ಸಮುದಾಯದ ಮತಗಳನ್ನು ಗುರಿಯಾಗಿಸಿಕೊಂಡು ಬಿಜೆಪಿ ತನ್ನ ರಾಜಕೀಯ ಚತುರತೆಯನ್ನು ಪ್ರದರ್ಶಿಸುತ್ತಿದೆ.
ರಾಜಣ್ಣ ಅವರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉಪಸ್ಥಿತರಿದ್ದರು. ಇದೇ ವೇಳೆ ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಪರಿಷತ್ ಸದಸ್ಯ ಎನ್. ರವಿಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗವಹಿಸಿದ್ದರು.
ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರ ಉಪಸ್ಥಿತಿಯಲ್ಲಿ ಕಾಡುಗೊಲ್ಲ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ರಾಜಣ್ಣ ಮತ್ತು ಬೆಂಬಲಿಗರು ಬಿಜೆಪಿಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವರಾದ ಶ್ರೀ ಎ. ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಕಾರಜೋಳ, ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ ಛಲವಾದಿ… pic.twitter.com/UZ4N3ttazV
— BJP Karnataka (@BJP4Karnataka) May 21, 2026



























































