ಬೆಂಗಳೂರು: ಮಹಿಳೆಯರ ಆರೋಗ್ಯ ಮತ್ತು ಘನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, 18 ರಿಂದ 52 ವರ್ಷದೊಳಗಿನ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ‘ಋತುಸ್ರಾವ ರಜೆ’ ಕಡ್ಡಾಯವಾಗಿ ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈ ಹಿಂದೆ ಸರ್ಕಾರ ಅನುಮೋದನೆ ನೀಡಿದ್ದರೂ, ಹಲವು ಕಂಪನಿಗಳು ಮತ್ತು ಸಂಸ್ಥೆಗಳು ಈ ಸೌಲಭ್ಯ ನೀಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ, ನೀತಿಯನ್ನು “ಕಟ್ಟುನಿಟ್ಟಾಗಿ ಮತ್ತು ನಂಬಿಕಸ್ತವಾಗಿ” ಜಾರಿಗೆ ತರಬೇಕು ಎಂದು ಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ.
ಬೆಳಗಾವಿ ಜಿಲ್ಲೆಯ ಮೂಡಲಗಿಯ ಹೋಟೆಲ್ ನೌಕರರೊಬ್ಬರು ರಜೆ ನೀಡಲಾಗುತ್ತಿಲ್ಲ ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಮಹಿಳೆಯರ ಜೈವಿಕ ಅಗತ್ಯತೆಗಳನ್ನು ಗೌರವಿಸುವುದು ಸಮಾನತೆಯ ಪ್ರಮುಖ ಅಂಶ ಎಂದು ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, “ಋತುಸ್ರಾವ ಆರೋಗ್ಯವು ಸಂವಿಧಾನದ ವಿಧಿ 21ರಡಿ ಬರುವ ಬದುಕುವ ಹಕ್ಕಿನ ಅವಿಭಾಜ್ಯ ಅಂಗ. ಇದು ಕೇವಲ ರಜೆಯ ವಿಷಯವಲ್ಲ, ಮಹಿಳೆಯರ ಘನತೆಯ ಪ್ರಶ್ನೆ” ಎಂದು ಸ್ಪಷ್ಟಪಡಿಸಿದೆ.
ನೋಂದಾಯಿತ ಎಲ್ಲಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ಶಾಶ್ವತ, ಗುತ್ತಿಗೆ ಹಾಗೂ ಹೊರಗುತ್ತಿಗೆ ಸೇರಿದಂತೆ 18 ರಿಂದ 52 ವರ್ಷದೊಳಗಿನ ಮಹಿಳಾ ನೌಕರರಿಗೆ ಈ ರಜೆ ಅನ್ವಯವಾಗಲಿದೆ. ಸಾಫ್ಟ್‌ವೇರ್ ಕಂಪನಿಗಳಷ್ಟೇ ಅಲ್ಲದೆ, ಹೋಟೆಲ್ ಕಾರ್ಮಿಕರು, ದಿನಗೂಲಿ ನೌಕರರು ಸೇರಿದಂತೆ ಅಸಂಘಟಿತ ವಲಯದ ಮಹಿಳೆಯರಿಗೂ ಈ ಸೌಲಭ್ಯ ತಲುಪುವಂತೆ ಮಾರ್ಗಸೂಚಿ ರೂಪಿಸಲು ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.
ಇದಲ್ಲದೆ, ‘ಕರ್ನಾಟಕ ಋತುಸ್ರಾವ ರಜೆ ಮತ್ತು ನೈರ್ಮಲ್ಯ ವಿಧೇಯಕ-2025’ನ್ನು ಶೀಘ್ರದಲ್ಲೇ ಕಾನೂನಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.






















































