ಬೆಂಗಳೂರು: ‘ಕೆಪಿಎಸ್ – ಮ್ಯಾಗ್ನೆಟ್ ಶಾಲಾ ಯೋಜನೆ ರದ್ದು ಪಡಿಸಿ, ಬಿಸಿಯೂಟ ಕಾರ್ಮಿಕರು ಹಾಗೂ ಬಡ ಜನತೆಯ ಮಕ್ಕಳ ಭವಿಷ್ಯವನ್ನು ರಕ್ಷಿಸಿ’ ಎಂದು ಕೈಗೊಂಡಿರುವ ರಾಜ್ಯ ಮಟ್ಟದ ಪ್ರತಿಭಟನೆಗೆ ಭಾರೀ ಬೆಂಬಲ ವ್ಯಕ್ತವಾಗಿದೆ.
ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘ (AIUTUC) ನೇತೃತ್ವದಲ್ಲಿ 10.4.2026 ರಂದು ರಾಜ್ಯ ಮಟ್ಟದ ಪ್ರತಿಭಟನೆ ಹಮ್ಮಿಕೊಂಡಿದೆ. ರಾಜ್ಯದ ಲಕ್ಷಾಂತರ ಬಿಸಿಯೂಟ ಕಾರ್ಮಿಕರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ‘ಕೆಪಿಎಸ್ ಮ್ಯಾಗ್ನೆಟ್’ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುತ್ತಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರತಿ ಮಗುವಿಗೆ ಹತ್ತಿರದಲ್ಲೇ ಶಿಕ್ಷಣ ಸಿಗಬೇಕೆಂಬ ನಿಯಮವಿದ್ದರೂ, ಶಾಲೆಗಳ ವಿಲೀನದಿಂದ ಬಡ ರೈತ ಕಾರ್ಮಿಕರ ಮಕ್ಕಳ ಶಿಕ್ಷಣದ ಹಕ್ಕು ಮೊಟಕುಗೊಳ್ಳುತ್ತದೆ.
ಕಳೆದ 25 ವರ್ಷಗಳಿಂದ ಅಲ್ಪ ಗೌರವಧನಕ್ಕೆ ಹಗಲಿರುಳು ಶ್ರಮಿಸುತ್ತಿರುವ ಸಾವಿರಾರು ಬಿಸಿಯೂಟ ಕಾರ್ಮಿಕರು ಶಾಲೆಗಳ ವಿಲೀನ ಪ್ರಕ್ರಿಯೆಯಿಂದಾಗಿ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ, ‘ಕೆಪಿಎಸ್ – ಮ್ಯಾಗ್ನೆಟ್ ಶಾಲಾ ಯೋಜನೆ ರದ್ದು ಪಡಿಸಿ, ಬಿಸಿಯೂಟ ಕಾರ್ಮಿಕರು ಹಾಗೂ ಬಡ ಜನತೆಯ ಮಕ್ಕಳ ಭವಿಷ್ಯವನ್ನು ರಕ್ಷಿಸಿ’ ಎಂದು ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ಪಿ.ಯಸ್.ಸಂಧ್ಯಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.























































