ತುಮಕೂರು: ಮೇಲಾಧಿಕಾರಿಯಿಂದ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಅವರು ನೇಣಿಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆ ಪಾವಗಡದಲ್ಲಿ ನಡೆದಿದೆ.
ಪಾವಗಡದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆದ ದಿನ ಸಂಜೆ ಕಚೇರಿಯ ಸಿಬ್ಬಂದಿ ತೆರಳಿದ ಬಳಿಕ, ಒಬ್ಬರೇ ಇದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಸಾವಿಗೆ ಮುನ್ನ ಮಲ್ಲಿಕಾರ್ಜುನ ಅವರು ವಿಡಿಯೋ ಸಂದೇಶ ದಾಖಲಿಸಿದ್ದು, ಅದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ತಮ್ಮ ಸಾವಿಗೆ ಜಂಟಿ ನಿರ್ದೇಶಕ ಕೃಷ್ಣಪ್ಪ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. “ನನ್ನ ತಾಯಿ, ಪತ್ನಿ, ಮಕ್ಕಳು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ ಮೇಲಾಧಿಕಾರಿಯ ಕಿರುಕುಳದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ” ಎಂದು ಅವರು ಹೇಳಿದ್ದಾರೆ.
ಅಲ್ಲದೇ, “ನನಗೆ ನ್ಯಾಯ ಸಿಗಲಿ, ಕೃಷ್ಣಪ್ಪ ಅವರಿಗೆ ದೇವರೂ ಕಾನೂನೂ ಶಿಕ್ಷೆ ನೀಡಲಿ” ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.
59 ವರ್ಷ ವಯಸ್ಸಿನ ಮಲ್ಲಿಕಾರ್ಜುನ ಅವರು ಕಳೆದ ಮೂರು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ನಿವೃತ್ತಿಯಾಗಬೇಕಿತ್ತು ಎನ್ನಲಾಗಿದೆ.
ಘಟನೆ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪಾವಗಡ ಪೊಲೀಸರು ಪರಿಶೀಲನೆ ನಡೆಸಿ, ಡೆತ್ ನೋಟ್ ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.






















































