ಮಂಗಳೂರು: SPYSS ಕರ್ನಾಟಕ ನೇತ್ರಾವತಿ ವಲಯದ ವತಿಯಿಂದ ಪೊಳಲಿ ನಗರದ ನಾರಳದಲ್ಲಿರುವ ಶ್ರೀ ಸೀತಾರಾಮ ಭಜನಾ ಮಂದಿರದಲ್ಲಿ ಮಾತೃಧ್ಯಾನ, ಮಾತೃವಂದನಾ ಹಾಗೂ ಮಾತೃಭೋಜನ ಕಾರ್ಯಕ್ರಮ ನೆರವೇರಿತು.

ಪೊಳಲಿ ನಗರ ವರದಿ ಪ್ರಮುಖರು ಹಾಗೂ ಯೋಗ ಶಿಕ್ಷಕಿ ಶ್ರೀಮತಿ ರಾಜೇಶ್ವರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಶಿಕ್ಷಕಿ ಶ್ರೀಮತಿ ಪರಿಮಳ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸಹ ಸಂಚಾಲಕ ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಆಧುನಿಕ ಬದುಕಿನಲ್ಲಿ ತಾಯಿಯ ಮಹತ್ವ, ಅವರ ತ್ಯಾಗ ಮತ್ತು ಸರಳ ಜೀವನ ಕ್ರಮದ ಕುರಿತು ವಿವರಿಸಿದರು.

ಭಜನೆ, ಆಟೋಟ ಸೇರಿದಂತೆ ವಿವಿಧ ಚಟುವಟಿಕೆಗಳೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು. ಸುಮಾರು 250ಕ್ಕೂ ಹೆಚ್ಚು ಯೋಗಬಂಧುಗಳು ಹಾಗೂ ಸಾರ್ವಜನಿಕರು ಭಾಗವಹಿಸಿದರು. 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿಯ ವರದಿಯನ್ನು ಯೋಗಬಂಧು ಸಾರಿಕಾ ವಾಚಿಸಿದರು. ಭಾಗವಹಿಸಿದ ಯೋಗಬಂಧುಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಅಶ್ವಿನಿ ಸ್ವಾಗತಿಸಿದರು. ಅನ್ನಪೂರ್ಣೇಶ್ವರಿ ಮಂತ್ರವನ್ನು ಸ್ವಾತಿ ಪಠಿಸಿದರು. ಕಾರ್ಯಕ್ರಮ ಸಂಚಾಲಕ ಕೃಷ್ಣಕಾಂತ್ ವಂದಿಸಿದರು. ಸೌಮ್ಯ ನಿರೂಪಿಸಿದರು. ಲೋಕಕಲ್ಯಾಣ ಮಂತ್ರದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.





















































