ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವದ ಚರ್ಚೆಗಳ ನಡುವೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು “ನಾನು ಯಾವಾಗಲೂ ಭರವಸೆಯ ಮೇಲೆ ಬದುಕಿದ್ದೇನೆ” ಎಂದು ಹೇಳಿದ್ದಾರೆ.
“ಎಲ್ಲರ ಪರಿಶ್ರಮಕ್ಕೆ ಫಲ ಸಿಗುತ್ತದೆ. ಪ್ರಯತ್ನ ಇರುವಲ್ಲಿ ಪ್ರತಿಫಲವಿದೆ. ಭಕ್ತಿ ಇರುವಲ್ಲಿ ದೇವರು ಇದ್ದಾನೆ” ಎಂದು ಅವರು ಪ್ರತಿಕ್ರಿಯಿಸಿದರು. ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ತಿಪಟೂರಿನಲ್ಲಿ ವರದಿಗಾರರೊಂದಿಗೆ ಮಾತನಾಡುವ ವೇಳೆ ಒಟ್ಟಾರೆ ವಿದ್ಯಮಾನಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಇತ್ತೀಚಿನ ದೆಹಲಿ ಭೇಟಿ ಬಳಿಕ ಹೆಚ್ಚು ಆತ್ಮವಿಶ್ವಾಸ ಹೊಂದಿದ್ದೀರಾ ಎಂಬ ಪ್ರಶ್ನೆಗೆ, ತಮ್ಮ ಹಿಂದಿನ ಹೇಳಿಕೆಯನ್ನು ಪುನರುಚ್ಚರಿಸಿದ ಅವರು, ಅಧಿಕಾರ ಹಂಚಿಕೆ ಕುರಿತು ಫೆಬ್ರವರಿ 17ರಂದು ಪಕ್ಷದ ಹೈಕಮಾಂಡ್ ತಮ್ಮನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿದೆ ಎಂಬ ವರದಿಗಳ ಬಗ್ಗೆ “ನನಗೆ ಅದರ ಮಾಹಿತಿ ಇಲ್ಲ. ಕಾಲವೇ ಉತ್ತರ ನೀಡುತ್ತದೆ” ಎಂದು ಹೇಳಿದರು.
ಗೃಹ ಸಚಿವ ಜಿ. ಪರಮೇಶ್ವರ ಹೈಕಮಾಂಡ್‌ನಿಂದ ಸ್ಪಷ್ಟನೆ ಪಡೆಯಲು ಮುಂದಾಗಿದ್ದಾರೆ ಎಂಬ ಪ್ರಶ್ನೆಗೆ “ಅವರಿಗೆ ಶುಭ ಹಾರೈಕೆ” ಎಂದು ಹೇಳಿದರು.
ವಿದೇಶ ಪ್ರವಾಸಕ್ಕೆ ತೆರಳಿರುವ ಶಾಸಕರ ಬಗ್ಗೆ ವರದಿ ಕೇಳಿದ್ದೀರಾ ಎಂಬ ಪ್ರಶ್ನೆಗೆ, “ನಾನು ಯಾವುದೇ ವರದಿ ಕೇಳಿಲ್ಲ. ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಿಲ್ಲ” ಎಂದು ಸ್ಪಷ್ಟಪಡಿಸಿದರು. ಹೈಕಮಾಂಡ್ ಮಧ್ಯಪ್ರವೇಶಿಸುವ ಸಾಧ್ಯತೆಯ ಬಗ್ಗೆ ಕೇಳಿದಾಗ, “ಈ ಬಗ್ಗೆ ನಾನು ಹೈಕಮಾಂಡ್ ಜೊತೆ ಚರ್ಚಿಸಿಲ್ಲ. ಪ್ರವಾಸಕ್ಕೆ ಹೋಗುತ್ತಿರುವವರು ನನ್ನೊಂದಿಗೆ ಮಾತನಾಡಿಲ್ಲ” ಎಂದರು.
“ಪಕ್ಷ ಏನು ಹೇಳುತ್ತದೋ ಅದಕ್ಕೆ ನಾನು ಬದ್ಧ. ಬೇರೆ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಶಾಸಕರು ಯಾವುದೇ ವಿಷಯ ಎತ್ತಿದರೆ, ಹೈಕಮಾಂಡ್ ನಾಯಕರು ಹಾಗೂ ಮುಖ್ಯಮಂತ್ರಿ ಪರಿಹರಿಸುತ್ತಾರೆ. ಪಕ್ಷ ಮತ್ತು ಸರ್ಕಾರದ ಶಿಸ್ತಿನ ಸಿಪಾಯಿಯಾಗಿ ಉಳಿಯುವುದು ನನ್ನ ಕರ್ತವ್ಯ” ಎಂದು ಹೇಳಿದರು.


























































