ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೈಡ್ ಪಾರ್ಕ್ ಅಪಾರ್ಟ್ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ‘ಚಿತ್ರಸಂತೆ’ ಸಂಸ್ಥೆಯ ವತಿಯಿಂದ 2026 ನೇ ಸಾಲಿನ ಕೊಡಮಾಡುವ ಕನ್ನಡ ನಾಡಿನ ಹೆಮ್ಮೆಯ ಸಾಧಕರು, ಅತ್ಯುತ್ತಮ ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದ ಅವಿಸ್ಮರಣೀಯ ಸೇವೆಗಾಗಿ ‘ಕರ್ನಾಟಕ ಅಚೀವರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಪುಷ್ಪ ಮತ್ತು ದೇವರಾಜು ದಂಪತಿ ಪುತ್ರ, ಪ್ರಸ್ತುತ ಸೃಷ್ಠಿ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಅಂಡ್ ರಿಸರ್ಚ್ ಸೆಂಟರ್ ಮತ್ತು ಡಿಪಿಎನ್ ಕಾನೂನು ಮಹಾವಿದ್ಯಾಲಯದ ಸಂಸ್ಥಾಪಕಾಧ್ಯಕ್ಷರಾದ ಪ್ರೊ.ಡಿ.ಗೋಪಾಲ ಕೃಷ್ಣ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಾಧನೆಯನ್ನು ಗುರುತಿಸಿದ ‘ಚಿತ್ರಸಂತೆ’ ಸಂಸ್ಥೆ ನೀಡುವ 2026ನೇ ಸಾಲಿನ, ಕನ್ನಡ ನಾಡಿನ ಹೆಮ್ಮೆಯ ಸಾಧಕರಿಗೆ ‘ಕರ್ನಾಟಕ ಅಚೀವರ್ಸ್ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ವೇಳೆ, ಮಾತನಾಡಿದ ‘ಚಿತ್ರಸಂತೆ’ ಸಂಸ್ಥೆಯ ಅಧ್ಯಕ್ಷರು ಹಾಗೂ ಮುಖ್ಯ ಸಂಪಾದಕರಾದ ಗಿರೀಶ್ ವಿ. ಗೌಡ್ರು, ನಮ್ಮ ಸಮಾಜದಲ್ಲಿ ಬಡವರಿಗೆ ಅತ್ಯಂತ ದೊಡ್ಡ ಮಟ್ಟದ ಶೈಕ್ಷಣಿಕ ಕ್ಷೇತ್ರದಲ್ಲಿ ಗುಣಮಟ್ಟದ ಅವಕಾಶಗಳನ್ನು ನೀಡಿದವರು. ಇನ್ನೂ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸಿರುವ ಪ್ರೊ.ಗೋಪಾಲಕೃಷ್ಣ ಡಿ, ರವರನ್ನು ಗೌರವಿಸುವ ಭಾಗ್ಯ ನಮಗೆ ಸಿಕ್ಕಿದೆ ಎಂದರು. ವ್ಯಕ್ತಿತ್ವವು ಕೇವಲ ಅಧಿಕಾರದಿಂದ ದೊಡ್ಡದಾಗುವುದಿಲ್ಲ, ಅವರು ಮಾಡುವ ಕೆಲಸ ಹಾಗೂ ಸಮಾಜದ ಮೇಲಿನ ಕಾಳಜಿಯಿಂದ ದೊಡ್ಡದಾಗುತ್ತದೆ ಎನ್ನುವುದಕ್ಕೆ ಇವರೇ ಸಾಕ್ಷಿ. ಕಷ್ಟದ ಸಮಯದಲ್ಲಿಯೂ ದೃತಿಗೆಡದೆ ಅವರು ತೋರಿದ ಹಾದಿ ನಮ್ಮಂತಹ ಅನೇಕರಿಗೆ ಸ್ಫೂರ್ತಿ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ.ಡಿ.ಗೋಪಾಲಕೃಷ್ಣ, ಶಿಕ್ಷಣ ಕ್ಷೇತ್ರವು ಎಂದೂ ಬಡವಾಗಬಾರದು. ಶಿಕ್ಷಣ ಆಕಾಂಕ್ಷಿಗಳಿಗೆ ಅವರ ಸಾಧನೆಗೆ ಪೂರಕವಾದ ಶಿಕ್ಷಣ ಸಿಗುವಂತಾಗಲು ಶಿಕ್ಷಣ ಸಂಸ್ಥೆಗಳು ಕೆಲಸ ಮಾಡಬೇಕು. ಅದಕ್ಕೆ ತಕ್ಕಂತೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡಬೇಕಿದೆ ಎಂದು ಪ್ರತಿಪಾದಿಸಿದರು.
ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಪೃಥ್ವಿ ಅಂಬಾರ್ ಹಾಗೂ ನಟಿ ಧಾನ್ಯ ರಾಮ್ ಕುಮಾರ್, ವಿವಿಧ ತಾರೆಯರು, ನಾಡಿನ ಸಾಧಕರು, ಪತ್ರಕರ್ತ ಈಶ್ವರ್ ಸಿರಿಗೇರಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.


























































