ಜೈಪುರ: ಮಾದಕ ದ್ರವ್ಯ ಕಳ್ಳಸಾಗಣೆ ವಿರುದ್ಧ ರಾಜಸ್ಥಾನ ಪೊಲೀಸರು ನಡೆಸಿದ ‘ಆಪರೇಷನ್ ನೀಲಕಂಠ’ ಅಡಿಯಲ್ಲಿ ನಾಗೌರ್ ಜಿಲ್ಲೆಯ ಖಿನ್ವ್ಸರ್ ಪ್ರದೇಶದಲ್ಲಿ ₹1.35 ಕೋಟಿ ಮೌಲ್ಯದ ಮೆಫೆಡ್ರೋನ್ (ಎಂಡಿ) ವಶಪಡಿಸಿಕೊಳ್ಳಲಾಗಿದೆ.
ನಾಗೌರ್ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಛಾವಾ ಅವರ ನೇತೃತ್ವದಲ್ಲಿ ಖಿನ್ವ್ಸರ್ ಪೊಲೀಸ್ ಠಾಣೆ ಹಾಗೂ ಜಿಲ್ಲಾ ವಿಶೇಷ ತಂಡ (ಡಿಎಸ್‌ಟಿ) ಸಂಯುಕ್ತವಾಗಿ ಈ ದಾಳಿ ನಡೆಸಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಪಂಚಲಸಿದ್ಧ ಗ್ರಾಮದ ನಿವಾಸಿ ಶ್ರವಣರಾಮ್ ಬಿಷ್ಣೋಯ್ ಮನೆಗಳಿಂದ ಮಾದಕ ದ್ರವ್ಯ ಜಾಲ ನಡೆಸುತ್ತಿರುವ ಕುರಿತು ಗೌಪ್ಯ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆಶಾರಾಮ್ ಚೌಧರಿ ಹಾಗೂ ಐಪಿಎಸ್ ಅಧಿಕಾರಿ ಜತಿನ್ ಜೈನ್ ಅವರ ಮೇಲ್ವಿಚಾರಣೆಯಲ್ಲಿ ದಾಳಿ ನಡೆಸಲಾಯಿತು.
ಪೊಲೀಸರ ಆಗಮನವನ್ನು ಗಮನಿಸಿದ ಪ್ರಮುಖ ಆರೋಪಿ ಶ್ರವಣರಾಮ್ ಬಿಷ್ಣೋಯ್ ಪರಾರಿಯಾಗಿದ್ದು, ಮನೆ ಪರಿಶೀಲನೆಯ ವೇಳೆ ಸ್ನಾನಗೃಹದ ನೆಲದ ಕೆಳಗೆ ನಿರ್ಮಿಸಿದ್ದ ರಹಸ್ಯ ಕೋಣೆಯಲ್ಲಿ ಬಚ್ಚಿಟ್ಟಿದ್ದ 670 ಗ್ರಾಂ ಎಂಡಿಯನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮಾದಕ ವಸ್ತುಗಳ ಮೌಲ್ಯ ₹1.35 ಕೋಟಿ ಎಂದು ಅಂದಾಜಿಸಲಾಗಿದೆ.
ಇದೊಂದಿಗೇ ಮಾದಕ ದ್ರವ್ಯ ಸಾಗಣೆಯಿಂದ ಬಂದ ಹಣವೆಂದು ಶಂಕಿಸಲಾದ ₹11.23 ಲಕ್ಷ ನಗದು, ಕೋಟ್ಯಂತರ ರೂಪಾಯಿ ಹವಾಲಾ ವಹಿವಾಟಿನ ದಾಖಲೆಗಳಿರುವ ಎರಡು ಡೈರಿಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಾಳಿಯ ವೇಳೆ ಆರೋಪಿಯ ಪತ್ನಿ ಪೂಜಾ ಬಿಷ್ಣೋಯ್ (23) ಅವರನ್ನು ಬಂಧಿಸಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆಯ ಸಂಬಂಧಿತ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪರಾರಿಯಾಗಿರುವ ಪ್ರಮುಖ ಆರೋಪಿಯನ್ನು ಪತ್ತೆಹಚ್ಚಲು ಹಲವು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ.
ಖಿನ್ವ್ಸರ್ ಠಾಣಾಧಿಕಾರಿ ರಾಮನಾರಾಯಣ್ ಭನ್ವಾರಿಯಾ ಹಾಗೂ ನಾಗೌರ್ ಡಿಎಸ್‌ಟಿ ತಂಡದ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತನಿಖೆ ಮುಂದುವರಿದಂತೆ ಇನ್ನಷ್ಟು ಬಂಧನಗಳ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
























































