ಬೆಂಗಳೂರು: ಮಂಡ್ಯ ಜಿಲ್ಲೆ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿಯವರು ಸೂಚಿಸಿದರು.
ವಿಕಾಸಸೌಧ ಕಚೇರಿಯಲ್ಲಿಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ತ್ವರಿತವಾಗಿ ಮುಕ್ತಾಯ ಗೊಳಿಸುವಂತೆ ತಿಳಿಸಿದರು.
ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ಹೈವೆ ಮಂಡ್ಯ ಜಿಲ್ಲೆಯ ಗಡಿಯ ಆರಂಭದಲ್ಲೆ ಸಂಪರ್ಕಿತ ಸರ್ವಿಸ್ ರಸ್ತೆಗೆ ಎಂಟ್ರಿ ಹಾಗೂ ಎಕ್ಸಿಟ್ ಗಳನ್ನು ವೈಜ್ಞಾನಿಕವಾಗಿ ನಿರ್ಮಿಸುವಂತೆ ಹಾಗೂ ಮದ್ದೂರು ಹೆದ್ದಾರಿ ಬಳಿ ಮಳೆ ನೀರು ಸರಾಗವಾಗಿ ಹರಿದುಹೋಗಲು ಡ್ರೈನೇಜ್ ನಿರ್ಮಿಸುವಂತೆ ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.
ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 150 A ಪಾಂಡವಪುರ- ನಾಗಮಂಗಲ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳಿದ್ದು, ಸಂಚಾರ ಮಾಡಲು ಅಸಾಧ್ಯವಾಗಿದ್ದು, ಶೀಘ್ರವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಾಮಗಾರಿಗೆ ಅಗತ್ಯ ವಿರುವ ಹೆಚ್ಚುವರಿ ಭೂಮಿಯ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಅವರು ನಿರ್ದೇಶನ ನೀಡಿದರು.
ಶ್ರೀರಂಗಪಟ್ಟಣದಿಂದ ಕುಶಾಲನಗರದವರೆಗೆ 92 ಕಿಲೋಮೀಟರ್ ರಾಷ್ಟೀಯ ಹೆದ್ದಾರಿ ಹಾದುಹೋಗಲಿದ್ದು, ಕಾಮಗಾರಿಯನ್ನು ದೂರದೃಷ್ಟಿ ಚಿಂತನೆಯೊಂದಿಗೆ ರೂಪಿಸಿ, ಭೂಸ್ವಾಧೀನ ಪ್ರಕ್ರಿಯೆ ಆದಷ್ಟು ಬೇಗ ಮುಗಿಸಿ ಕಾಮಗಾರಿ ಅನುಷ್ಠಾನ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದರು.
NH 7 ರಾಷ್ಟ್ರೀಯ ಹೆದ್ದಾರಿ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಬಳಿ ಹಾದುಹೋಗಲಿದ್ದು, ಬೆಳ್ಳೂರು ಕ್ರಾಸ್ ಬಳಿ ಸಂಪರ್ಕಿತ ಸರ್ವಿಸ್ ರಸ್ತೆಯನ್ನು ಅಗಲೀಕರಿಸುವಂತೆ ಹಾಗೂ ನಾಗಮಂಗಲ ಬೈಪಾಸ್ ರಸ್ತೆ ಮತ್ತು ಚುಂಚನಗಿರಿ- ಹೊಸಮನೆ ರಸ್ತೆ ಕಾಮಗಾರಿ, ಮೇಲ್ಸೇತುವೆ ಕಾಮಗಾರಿ ಸೇರಿದಂತೆ ಇತರ ಕಾನೂನು ಕಾರ್ಯವಿಧಾನಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಡ್ಯ ಜಿಲ್ಲೆಯಲ್ಲಿ ಹಾದುಹೋಗುವ ಬಾಕಿ ಉಳಿದ ಹೆದ್ದಾರಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಚಿವ ಚಲುವರಾಯಸ್ವಾಮಿಯವರು ಇದೇ ವೇಳೆ ಅಧಿಕಾರಿಗಳಿಗೆ ತಿಳಿಸಿದರು.




















































