ಬೆಂಗಳೂರು: ಬೆಂಗಳೂರಿನ ಗಾಂಧಿನಗರದಲ್ಲಿರುವ ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಪ್ರಧಾನ ಕಚೇರಿಯಲ್ಲಿ ನೂತನವಾಗಿ ಸ್ಥಾಪಿಸಲಾದ ಕಾರಾಗೃಹ ‘ಸೆಂಟ್ರಲ್ ಕಮಾಂಡ್ ಸೆಂಟರ್’ ಉದ್ಘಾಟನೆಗೊಂಡಿದೆ.
ಈ ವೇಳೆ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಕೈದಿಗಳ ಸುಧಾರಣೆಗೆ ನಡೆಯುತ್ತಿರುವ ಕಾರ್ಯ ಚಟುವಟಿಕೆಗಳ ಕುರಿತ ಕೈಪಿಡಿಯನ್ನು ಬಿಡುಗಡೆ ಮಾದಲಾಯಿತು.
ರಾಜ್ಯದ ಎಲ್ಲ ಪ್ರಮುಖ ಕಾರಾಗೃಹಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕಣ್ಗಾವಲು ಮೂಲಕ ನಿಗಾವಹಿಸಲು ಅನುಕೂಲವಾಗಲಿದೆ. ಒಟ್ಟು 1076 ಕ್ಯಾಮೆರಾಗಳನ್ನು ಸೆಂಟ್ರಲ್ ಕಮಾಂಡ್ ಸೆಂಟರ್‌ಗೆ ಕನೆಕ್ಟ್ ಮಾಡಲಾಗಿದೆ.
ಕಾರಾಗೃಹಗಳಿಗೆ ನಿಷೇಧಿತ ವಸ್ತುಗಳ ಸರಬರಾಜು, ಕಾನೂನು ಬಾಹಿರ ಚಟುವಟಿಕೆ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಕಮಾಂಡ್ ಸೆಂಟರ್ ಮೂಲಕ ದಿನದ 24 ಗಂಟೆಯು ನಿಗಾವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಜೈಲುಗಳಲ್ಲಿನ ಕ್ಯಾಮೆರಾಗಳನ್ನು ಕಮಾಂಡ್ ಸೆಂಟರ್‌ಗೆ ಕನೆಕ್ಟ್ ಮಾಡಲಾಗುವುದು. ಕಮಾಂಡ್ ಸೆಂಟರ್ ಸುಧಾರಣೆ ಕ್ರಮವಾಗಿದ್ದು, ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮತ್ತಷ್ಟು ಬದಲಾವಣೆಗಳನ್ನು ತರಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ರಾಜ್ಯ ಕಾರಾಗೃಹ ಮತ್ರು ಸುಧಾರಣಾ ಸೇವಾ ಇಲಾಖೆಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಕುಮಾರ್, ಪೊಲೀಸ್ ಉಪಮಹಾನಿರೀಕ್ಷರಾದ ಜಿನೇಂದ್ರ ಖಣಗಾವಿ, ಪೊಲೀಸ್ ಅಧೀಕ್ಷಕರಾದ ಅಂಶು ಕುಮಾರ್ ಅವರು ಉಪಸ್ಥಿತರಿದ್ದರು.



















































