ಬೆಂಗಳೂರು: ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಿಸಿದವರು ರಾಜ್ಯದ ವಸತಿ ಯೋಜನೆಗೆ ಅರ್ಹರೋ? ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ವಲಸೆ ಬಂದು ಕಷ್ಟಪಟ್ಟು ಕೂಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ವಸತಿ ಯೋಜನೆಗೆ ಅರ್ಹರೋ? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಹೈ ಕಮಾಂಡ್ ಒತ್ತಡಕ್ಕೆ ಮಣಿದು ಬೆಂಗಳೂರಿನ ಯಲಹಂಕದ ಕೋಗಿಲುವಿನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಕುಟುಂಬಗಳನ್ನು ತೆರವು ಮಾಡಿದ ನಂತರ ಅವರಿಗೆ ರಾಜ್ಯ ಸರ್ಕಾರದ ವಸತಿ ಇಲಾಖೆಯ ಮೂಲಕ ಮನೆಗಳನ್ನು ಜನವರಿ 1, 2026 ರಂದು ಹಸ್ತಾಂತರ ಮಾಡಲಾಗುವುದು ಎಂದು ಸಚಿವ ಜಮೀರ್ ಅಹಮ್ಮದ್ ಹೇಳಿದ್ದಾರೆ. ನಿಯಮಾವಳಿಗಳನ್ನು ಗಾಳಿಗೆ ತೂರಿ ಅಲ್ಪ ಸಂಖ್ಯಾತರನ್ನು ಓಲೈಸಲು ಕೋಗಿಲು ಸಂತ್ರಸ್ತರಿಗೆ ಅಕ್ರಮವಾಗಿ ಮನೆ ಹಂಚಿಕೆ ಮಾಡುತ್ತಿರುವುದು ಖಂಡನೀಯ ಹಾಗೂ ಈ ಯೋಜನೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.
ಸರ್ಕಾರಕ್ಕೆ, ನಿಜಕ್ಕೂ ಕಾಳಜಿಯಿದ್ದಲ್ಲಿ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಗುಳೆ ಬಂದು ಕೂಲಿ ಕಾರ್ಮಿಕರಾಗಿ ಹಲವು ದಶಕಗಳಿಂದ ಕೆಲಸ ಮಾಡುತ್ತಿರುವವರಿಗೆ ಮನೆಗಳನ್ನು ಹಂಚಿಕೆ ಮಾಡಬೇಕೆ ಹೊರತು ತೆರಿಗೆ ಕಟ್ಟದೆ, ಸರ್ಕಾರಿ ಭೂಮಿಯಲ್ಲಿ ಶೆಡ್ ಹಾಕಿಕೊಂಡು ವಾಸಿಸುತ್ತಿರುವವರಿಗಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಜೀವನ ಕಟ್ಟಿಕೊಳ್ಳಲು ಶ್ರಮ ಪಡುತ್ತಿರುವ ನಮ್ಮ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರಿಗೆ, ದಿನ ಗೂಲಿ ನೌಕರರಿಗೆ, ಹಲವು ವರ್ಷಗಳಿಂದ ಇಲ್ಲೇ ನೆಲಸಿ ಸೂರಿಲ್ಲದವರಿಗೆ ಸರ್ಕಾರ ರಾಜೀವ್ ಗಾಂಧಿ ವಸತಿ ಯೋಜನೆಯಡಿ ನೀಡಬೇಕೆ ಹೊರತು ಕಾನೂನನ್ನು ಉಲ್ಲಂಘಿಸಿ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿದವರಿಗಲ್ಲ ಎಂದವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. .

























































