ಬೆಂಗಳೂರು: ದೇಶದ ಪ್ರತಿಷ್ಠಿತ ಆಹಾರೋದ್ಯಮ ಸಂಸ್ಥೆ ChefTalk ಇದೀಗ 18 ಸಾರ್ಥಕ ವರ್ಷಗಳನ್ನು ಕ್ರಮಿಸಿದೆ. ನಾಡು ಹೊಸ ವರ್ಷಾಚರಣೆಯ ಸಂದರ್ಭದಲ್ಲಿದ್ದಾಗಲೇ ಈ ಸಂಸ್ಥೆಯ ಗರಡಿಯಲ್ಲಿ ಸಾಧನೆಯ ಹರ್ಷೋದ್ಗಾರ ಪ್ರತಿಧ್ವನಿಸಿದೆ. ಸಾಮಾಜಿಕ ಕಾರ್ಯಕರ್ತ ಗೋವಿಂದ ಬಾಬು ಪೂಜಾರಿ ಸ್ಥಾಪಿಸಿರುವ ChefTalk ಸಂಸ್ಥೆ ಅಪೂರ್ವ ಸಾಧನೆಯ ಹೊಸ್ತಿಲಲ್ಲಿರುವಾಗಲೇ ವಿವಿಧ ಕ್ಷೇತ್ರಗಳ ಗಣ್ಯರು ಶುಭ ಹಾರಿಸಿದ ವಿಶಿಷ್ಟ ಕಾರ್ಯಕ್ರಮವೂ ಗಮನಸೆಳೆದಿದೆ.

ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ChefTalk ಕೇಂದ್ರ ಕಚೇರಿಯಲ್ಲಿ ನಡೆದ ಈ ವಾರ್ಷಿಕ ಉತ್ಸವವನ್ನು ಈ ಬಾರಿ ಹಿಂದೆಂದಿಗಿಂತಲೂ ವಿಶಿಷ್ಟವಾಗಿ ಆಚರಿಸಲಾಯಿತು. ಕಾರ್ಮಿಕ ಸಂಸ್ಥೆಗಳು, ನ್ಯಾಯಾಂಗ- ಕಾರ್ಯಂಗದ ಕ್ಷೇತ್ರದ ಗಣ್ಯರು, ಪೋಲೀಸ್ ಅಧಿಕಾರಿಗಳು, ಸಾಮಾಜಿಕ ಹೋರಾಟಗಾರರು ಈ ಸಮಾರಂಭದಲ್ಲಿ ಪಾಲ್ಗೊಂಡು ಸಡಗರಕ್ಕೆ ಅರ್ಥ ತುಂಬಿದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧುರಿ ಅವರು ಈ ‘ಕಾರ್ನಿವಾಲ್’ ಉದ್ಘಾಟಿಸಿದರು. ಚಿತ್ರನಟ ಎಸ್.ನಾರಾಯಣ್, ಉಪ ಪೋಲೀಸ್ ಆಯುಕ್ತರಾದ ರೀನಾ ಸುವರ್ಣ, ಕೆ.ಎಂ.ಸತೀಶ್, ಮಹೇಶ್ ಕುಮಾರ್, ನಿವೃತ್ತ ನ್ಯಾಯಾಧೀಶರಾದ ಮನುನಾಥ್ ನಾಯ್ಕ್, ಸಾಮಾಜಿಕ ಕಾರ್ಯಕರ್ತ ರವಿ ಶೆಟ್ಟಿ ಬೈಂದೂರು ಮೊದಲಾದವರು ಆಹಾರೋದ್ದಿಮೆ ಸಂಸ್ಥೆಯ ಸುಮಾರು 5 ಸಾವಿರ ಉದ್ಯೋಗಿಗಳಿಗೆ ಸ್ಫೂರ್ತಿಯ ಮಾತುಗಳನ್ನಾಡಿದರು. ChefTalk ಸಂಸ್ಥೆ ಕಟ್ಟಿ ಬೆಳೆಸಿ 5 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಆಧಾರವಾಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರನ್ನು ನಾಗಲಕ್ಷ್ಮಿ ಚೌಧುರಿ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ACP ರೀನಾ ಸುವರ್ಣ ಮಾತನಾಡಿ, ಖಾಸಗಿ ಸಂಸ್ಥೆ ಯಲ್ಲಿ ದುಡಿಯುವ ಮಹಿಳೆಯರು ಸಮಾಜಕ್ಕೂ ಮಾದರಿಯಾಗಬೇಕಿದೆ. ಸಮಾಜದ ಧ್ವನಿಯಾಗಬೇಕಿದೆ ಎಂದರು. ಉದ್ಯಮಿಗಳು ಸಮಾಜ ಆಸ್ತಿ ಎಂಬುದಕ್ಕೆ ಗೋವಿಂದ ಪೂಜಾರಿ ಸಾಕ್ಷಿಯಾಗಿದ್ದಾರೆ. ChefTalk ಸಂಸ್ಥೆ ಮೂಲಕ 5 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕರುಣಿಸುವ ಅವರು, ಬ್ಯಾಂಕಿಂಗ್ ಹಾಗೂ ಚಾರಿಟಬಲ್ ಟ್ರಸ್ಟ್ ಮೂಲಕ ಮನೆಗಳನ್ನು ದಾನ ಮಾಡಿ ಬಡ ಕುಟುಂಬಗಳಿಗೂ ಆಸರೆಯಾಗಿದ್ದಾರೆ ಎಂದು ಕೊಂಡಾಡಿದರು.

ಸಾಮಾಜಿಕ ಹೋರಾಟಗಾರ ಬೈಂದೂರು ಮಾತನಾಡಿ, ಗೋವಿಂದ ಬಾಬು ಪೂಜಾರಿಯವರನ್ನು ಉದ್ಯೋಗ ಸೃಷ್ಟಿಯ ದಂಡನಾಯಕ ಎಂದು ಬಣ್ಣಿಸಿದರು. ಹಲವಾರು ಮಂದಿಗೆ ಸ್ವ ಉದ್ಯೋಗ ಕಲ್ಪಿಸಿರುವ ಪೂಜಾರಿಯವರು, ಎಲ್ಲರಿಗೂ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಶಾಲೆಗಳನ್ನು ದತ್ತು ಪಡೆಯುತ್ತಿದ್ದಾರೆ. ಜೊತೆಗೆ ಕ್ರಿಯಾಶೀಲ ವ್ಯಕ್ತಿಗಳ ಗುಂಪನ್ನು ಕಟ್ಟಿಕೊಂಡು ಕೌಶಲ್ಯಾಭಿವೃದ್ಧಿ ಕಡೆಗೂ ಆದ್ಯತೆ ನೀಡುತ್ತಿದ್ದಾರೆ ಎಂದರು.

ನಿವೃತ್ತ ನ್ಯಾಯಾಧೀಶ ನಾಯ್ಕ್ ಹಾಗೂ ನಟ ಎಸ ನಾರಾಯಣ್ ಮಾತನಾಡಿ, ಗೋವಿಂದ ಬಾಬು ಪೂಜಾರಿಯವರು ಅನನ್ಯ ಸಮಾಜ ಸೇವೆ ಮಾಡಿದರೂ ಪ್ರಚಾರ ಬಯಸದ ವ್ಯಕ್ತಿತ್ವ ಹೊಂದಿದ್ದಾರೆ. ಅವರಿಗೂ ಅವರ ಜೊತೆ ಸೈನಿಕರಂತೆ ಕೆಲಸ ಮಾಡುವ ಶ್ರಮಿಕ ವರ್ಗಕ್ಕೂ ಶುಭ ಹಾರೈಸಿದರು.
ಇದೇ ವೇಳೆ, ChefTalk ಸಂಸ್ಥೆಯ ವಿವಿಧ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳ ಪೈಕಿ ನೂರಕ್ಕೂ ಹೆಚ್ಚು ಮಂದಿಗೆ ಬೆಸ್ಟ್ ಎಂಪ್ಲಾಯೀಸ್ ಅವಾರ್ಡ್ ನೀಡಿ ಸನ್ಮಾನಿಸಲಾಯಿತು. ಯಕ್ಷಗಾನ, ನೃತ್ಯ ರೂಪಗಳು ಈ ವಾರ್ಷಿಕ ಸಂಭ್ರಮಕ್ಕೆ ಆಕರ್ಷಣೆ ತುಂಬಿತು.







































































