ನವದೆಹಲಿ: ನವದೆಹಲಿಯ ಭಾರತ ಮಂಟಪಂನಲ್ಲಿ ಭಾರತ ಸರ್ಕಾರದ ಜಲಶಕ್ತಿ ಇಲಾಖೆಯಿಂದ ಆಯೋಜಿಸಲಾದ “ವಿಸುಜಲಂ ಭಾರತ್’ 2 ದಿವಸಗಳ ಕಾರ್ಯಗಾರ ಹಲವು ವಿಚಾರಗಳ ಚಿಂತನ ಮಂಥನಕ್ಕೆ ವೇದಿಕೆಯಾಯಿತು.ಕೇಂದ್ರ ಜಲಶಕ್ತಿ ಸಿ.ಆರ್. ಪಾಟೀಲ್, ರಾಜ್ಯ ಖಾತೆಯ ಸಚಿವ ರಾಜ್ ಭೂಷಣ್ ಚೌದರಿ ಅವರು ಕಾರ್ಯಗಾರ ಉದ್ಘಾಟಿಸಿದರು.
ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ.ಸೋಮಣ್ಣನ ಭಾಗವಹಿಸಿ ಹಲವು ವಿಚಾರಗಳನ್ನು ಮಂಡಿಸಿದರು. ಪ್ರಧಾನಿ ಮಂತ್ರಿ ಮೋದಿಯವರು “ವಿಕಸಿತ್ ಭಾರತ್@2047” ಎಂಬ ಪರಿಕಲ್ಪನೆಯೊಂದಿಗೆ ಈ ದೇಶವನ್ನು ಮುನ್ನೆಡಸುತ್ತಿದ್ದು, ನೀರಿನ ಸಂರಕ್ಷಣೆ, ನೀರಿನ ಭದ್ರತೆ, ಸ್ವಚ್ಛತೆ ಇವುಗಳ ವಿಚಾರವಾಗಿ ಚರ್ಚೆಗೆ ವೇದಿಕೆಯಾಗಿರುವ ಈ ಕಾರ್ಯಗಾರ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಸಂತಸ ಹಂಚಿಕೊಂಡರು .
ನೀರು ಒಂದು ಅತ್ಯಮೂಲ್ಯ ಸಂಪನ್ಮೂಲವಾಗಿದ್ದು, 140 ಕೋಟಿ ಭಾರತೀಯರ ಅಸ್ತಿತ್ವ ಹಾಗೂ ಅಭಿವೃದ್ದಿಯ ಮೂಲವಾಗಿದೆ. ಭಾರತವು ವಿಶ್ವದ ಶೇಕಡಾ 20ರಷ್ಟು ಜನಸಂಖ್ಯೆಯನ್ನು ಹೊಂದಿದ್ದು, ಲಭ್ಯವಿರುವ ಶುದ್ದ ನೀರಿನ ಶೇಕಡಾ 4ರಷ್ಟನ್ನು ಮಾತ್ರ ಹೊಂದಿದ್ದು, ಈ ಸಂಪನ್ಮೂಲವನ್ನು ಕಾಪಾಡುವ ಜವಾಬ್ಧಾರಿ ಹಾಗೂ ಅವಶ್ಯಕತೆಯ ಬಗ್ಗೆ ಕೇಂದ್ರ ಸಚಿವ ವಿ. ಸೋಮಣ್ಣ ಕಾರ್ಯಗಾರದಲ್ಲಿ ವಿವರಿಸಿದರು.
ಭಾರತ ಸರ್ಕಾರವು ಸ್ವಚ್ಛ ಭಾರತ್ ಗ್ರಾಮೀಣ್ ಯೋಜನೆಯಡಿಯಲ್ಲಿ ನೂರು ಮಿಲಿಯನ್ ವಸತಿಗಳಿಗೆ ಶೌಚಾಲಯಗಳನ್ನು ನಿರ್ಮಿಸುವುದರೊಂದಿಗೆ ಆರು ಲಕ್ಷ ಹಳ್ಳಿಗಳು ಬಯಲು ಶೌಚ ಮುಕ್ತ ಎಂದು ಘೋಸಿಸಲ್ಪಟ್ಟಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ವಿವರಿಸಿದರು.
ಜಲ ಜೀವನ್ ಮಿಶನ್ ಮತ್ತು ಸ್ವಚ್ಛ ಭಾರತ್ ಮಿಶಿನ್ ಗ್ರಾಮೀಣ ಯೋಜನೆಗಳಡಿಯಲ್ಲಿ ಭಾರತದ ಗ್ರಾಮೀಣ ಭಾರತದ ಮಹಿಳೆಯರಿಗೆ ಸ್ವಾಭಿಮಾನದ ಜೀವನ ಕಲ್ಪಿಸುವದರೊಂದಿಗೆ ಸುಧಾರಿತ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಿ ಅವರ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ ಎಂದರು.
ಸ್ವಚ್ಛ ಭಾರತ್ (ಗ್ರಾಮೀಣ) ಎರಡನೇ ಹಂತದಲ್ಲಿ ‘ಗ್ರೆ ವಾಟರ್ ಮ್ಯಾನೆಜಮೆಂಟ್’ ಯೋಜನೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು, ಶೇಕಡಾ 91ರಷ್ಟು ಹಳ್ಳಿಗಳು ಈ ವ್ಯವಸ್ಥೆಯಲ್ಲಿ ಸುಧಾರಣೆಗೊಂಡಿದೆ. ಇದು ನೀರಿನ ಸರಂಕ್ಷಣೆ ಹಾಗೂ ಅಂತರ್ಜಲ ವೃದ್ದಿಗೆ ಕಾರಣವಾಗಿದೆ. ನೀರಿನ ಬಳಕೆಯ ಕ್ಷಮತೆ ಹಾಗೂ ಸಮಾನ ಹಂಚಿಕೆಯ ಸಲುವಾಗಿ ಮುಂದಿನ ಹಂತದಲ್ಲಿ ತಂತ್ರಜ್ಷಾನ ಅಳವಡಿಕೆ, ಸಮುದಾಯಗಳ ಭಾಗವಹಿಸುವಿಕೆ, ಸಾಂಸ್ಥಿಕ ಒಗ್ಗೂಡಿಕೆಗೆ ಒತ್ತು ನೀಡಲಾಗುವುದು ಎಂದು ವಿ.ಸೋಮಣ್ಣ ತಿಳಿಸಿದರು .
ಏಷಿಯಾದ ಮೊಟ್ಟಮೊದಲ ಸಂಪೂರ್ಣ ಸ್ವಯಂಚಾಲಿತ ನೀರಾವರಿ ಯೋಜನೆಯಾದ ನಾರಾಯಣಪುರ ಎಡದಂಡೆ ಕಾಲುವೆ, ಸ್ಕಾಡಾ ಯೋಜನೆ ಮೂಲಕ ಸಾಧಿಸಲಾದ ನೀರಿನ ಮಿತವ್ಯಯ ಮತ್ತು ಕಟ್ಟ ಕಡೆಯ ಹಂತದವರೆಗೆ ನೀರಿನ ಯಶಸ್ವಿ ಹಂಚಿಕೆ ಹಾಗೂ ಐಹೋಳೆ ದೇವಾಲಯದಲ್ಲಿನ ಪುರಾತನ ಸ್ಟೆಪ್‍ವೆಲ್‍ಗಳಲ್ಲಿ ಬಳಕೆಯಾದ ಉಪಾಯಗಳ ಮೂಲಕ ಯಾವ ರೀತಿ ಕಠಿಣ ಕಲ್ಲು ಪ್ರದೇಶದಲ್ಲಿಯೂ ಸಹ ನೀರಿನ ಸಂರಕ್ಷಣೆ ಸಾಧ್ಯ ಎನ್ನುವುದನ್ನು ಕರ್ನಾಟಕ ರಾಜ್ಯದ ಎರಡು ಪ್ರಮುಖ ಯಶ್ವಸಿ ಪ್ರಯೋಗಗಳ ಉದಾಹರಣೆ ಮೂಲಕ ವಿವರಿಸಿದರು.
ಭಾರತ್ ಮಂಟಂಪನಲ್ಲಿ ಜರುಗಿದ ಇಂದಿನ ವೇದಿಕೆಯ ಮುಖಾಂತರ ಭಾಗವಹಿಸಿರುವ ಎಲ್ಲಾ ಪಾಲುದಾರರು ನೀಡುವ ಸಲಹೆಗಳು ಮತ್ತು ಅವರ ಅನುಭವ ಎಲ್ಲವೂ ಪ್ರಧಾನ ಮಂತ್ರಿಗಳ ವಿಕಸಿತ್ ಭಾರತ್ 2047ರ ಕನಸನ್ನು ನನಸಾಗಿಸುವಲ್ಲಿ ಸಹಾಯಕವಾಗಲಿದೆ ಎಂದರು.






















































