ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಿಎಂ ಪಟ್ಟಕ್ಕಾಗಿ ತಮ್ಮ ಬೆಂಬಲಿಗರು ನೀಡುತ್ತಿರುವ ಹೇಳಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ಮುಂದಿನ ಬೆಳವಣಿಗೆ ಬಗೆಗಿನ ಕುತೂಹಲವನ್ನೂ ಹೆಚ್ಚಿಸಿದೆ.
ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಫೈಟ್ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದ ತಂತ್ರ ಒಂದು ಕಡೆಯಾದರೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಬಣದ ಪ್ರತಿತಂತ್ರ ಹೈಕಮಾಂಡ್’ಗೂ ಸವಾಲೆಂಬಂತಾಗಿದೆ. ‘ನಾಲ್ಕೈದು ಜನರ ನಡುವಿನ ಒಪ್ಪಂದದ ಮೇಲೆ ನಂಬಿಕೆ ಇದೆ’ ಎಂದಿರುವ ಡಿಕೆಶಿ ಮಾತಿನ ಹಿಂದಿನ ಮರ್ಮವೇನು ಎಂಬುದೇ ಚರ್ಚೆಯ ಕೇಂದ್ರಬಿಂದು.
‘ನಾಲ್ಕೈದು ಜನರ ನಡುವಿನ ಒಪ್ಪಂದ’ ಎಂಬ ಅವರ ಮಾತು ‘ನಾನೇ ಮುಂದಿನ ಸಿಎಂ’ ಎಂಬ ಪದದ ಅನ್ವರ್ಥದಂತಿದೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಪ್ರದೇಶ ಕಾಂಗ್ರೆಸ್ ಪಾಲಯದಲ್ಲಿನ ಬೆಳವಣಿಗೆ ಕುರಿತಂತೆ ಪ್ರತಿಕ್ರಿಯಿಸಿದರು. ಪಕ್ಷದಲ್ಲಿನ ರಹಸ್ಯವೊಂದನ್ನು ತೆರೆದಿಟ್ಟರು. ಬಹುಷಃ ಅದು ಸರ್ಕಾರ ಅಸ್ತಿತ್ವಕ್ಕೆ ಬಂದಾಗ ನಾಯಕರ ಒಪ್ಪಂದ ನಡೆದಿರುವ ವಿಚಾರವಲ್ಲದೆ ಬೇರೇನೂ ಅಲ್ಲ.
ಅಂದು ನಡೆದಿದ್ದೇನು?
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪಾತ್ರ ಮಹತ್ವದ್ದಾಗಿತ್ತು. ಆ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಪ್ರತಿಪಕ್ಷ ನಾಯಕರಾಗಿದ್ದರೂ ಕೂಡಾ, ಹಗರಣಗಳ ವಿಚಾರದಲ್ಲಿ ಹೋರಾಟ, ತಂತ್ರಗಾರಿಕೆಯಲ್ಲಿ ಮುಂಚೂಣಿಯಲ್ಲಿದ್ದದ್ದು ಡಿಕೆಶಿ, ಪ್ರಿಯಾಂಕ್ ಖರ್ಗೆಯಂಥವರು.
ನಂತರದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ ಪಾಳಯದಲ್ಲಿ ಆಗಿದ್ದೆ ಬೇರೆ. ಆ ವರೆಗೂ ಪಕ್ಷ ಸಂಘಟಕ ಡಿ.ಕೆ.ಶಿವಕುಮಾರ್ ಅವರೇ ಸಿಎಂ ಆಗುತ್ತಾರೆ ಎಂದೇ ಚರ್ಚೆ ನಡೆದಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅಹಿಂದ ನಾಯಕ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಪಟ್ಟ ಕಟ್ಟಿತು. ಎರಡೂವರೆ ವರ್ಷಗಳ ನಂತರದ ಡಿಕೆಶಿ ಅವರಿಗೆ ಅಧಿಕಾರ ಬಿಟ್ಟುಕೊಡುವ ಸೂತ್ರ ರೂಪಿಸಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿತ್ತು. ನವೆಂಬರ್ ತಿಂಗಳಲ್ಲಿ ಕ್ರಾಂತಿ ನಡೆಯಲಿದೆ ಎಂಬ ಕುತೂಹಲಕಾರಿ ಮಾತುಗಳೂ ಹರಿದಾಡಿತ್ತು. ಆ ಚರ್ಚೆಗಳಿಗೆ ಇದೀಗ ಬಗೆ ಬಗೆಯ ವಿದ್ಯಮಾನಗಳು ಗುದ್ದು ಕೊಟ್ಟಿವೆ. ಆದರೆ, ಸಿಎಂ ಬದಲಾವಣೆ ಬಗ್ಗೆ ಖಚಿತತೆ ಇಲ್ಲವಾಗಿದೆ.
ಈ ನಡುವೆ, ಡಿಕೆಶಿ ಸಿಡಿಸಿರುವ ‘ರಹಸ್ಯ ಒಪ್ಪಂದ’ದ ಬಾಂಬ್ ಎಲ್ಲರ ಕುತೂಹಲದ ಕೇಂದ್ರಬಿಂದು ವಾಗಿರುವುದಂತೂ ಸತ್ಯ. ‘ನನ್ನನ್ನು ಮುಖ್ಯಮಂತ್ರಿ ಮಾಡಿ ಅಂತಾ ನಾನು ಕೇಳಿಯೇ ಇಲ್ಲ’ ಎಂದು ಡಿಕೆಶಿ ಹೇಳಿದ್ದಾರೆ. “ಮುಖ್ಯಮಂತ್ರಿ ಬದಲಾವಣೆ ವಿಷಯವನ್ನು ಸಾರ್ವಜನಿಕವಾಗಿ ಚರ್ಚಿಸಲು ಬಯಸುವುದಿಲ್ಲ. ಏಕೆಂದರೆ ಇದು ಪಕ್ಷದಲ್ಲಿ ನಾಲ್ಕೈದು ಜನರ ನಡುವೆ ನಡೆದ ‘ರಹಸ್ಯ ಒಪ್ಪಂದ” ಎಂದಿದ್ದಾರೆ. ‘ನಾನು ಆತ್ಮಸಾಕ್ಷಿಯನ್ನು ನಂಬುತ್ತೇನೆ’ ಎಂದು ಒಗಟಾಗಿ ನುಡಿದಿದ್ದಾರೆ.
ಹಾಗಾದರೆ, ಅಧಿಕಾರ ಹಂಚಿಕೆ ಕುರಿತಂತೆ ಕಾಂಗ್ರೆಸ್ ಪಕ್ಷದೊಳಗೆ ಒಪ್ಪಂದ ನಡೆದಿದೆ ಎಂಬ ಮಾತುಗಳು ನಿಜವೆಂದಾಯಿತು! ಆ ರೀತಿಯ ಸೂತ್ರವೇ ಇದೀಗ ಡಿಕೆಶಿ ಬೆಂಬಲಿಗರ ಹೇಳಿಕೆಗಳಲ್ಲಿ ಪ್ರತಿಧ್ವನಿಸುತ್ತಿರಬಹುದು..!! ಪ್ರದೇಶ ಕಾಂಗ್ರೆಸ್ ಸರ್ಕಾರ ನವೆಂಬರ್ 20 ರಂದು ತನ್ನ ಎರಡೂವರೆ ವರ್ಷ ಪೂರ್ಣಗೊಳಿಸಿದೆ. ಒಪ್ಪಂದ ನಡೆದಿದ್ದೇ ಆದರೆ, ಸದ್ಯದಲ್ಲೇ ಸೂತ್ರ ಜಾರಿ’ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಕೈಗೊಳ್ಳಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.
ಕೈ ಪಾಳಯದಲ್ಲಿ ತಳಮಳ ಸೃಷ್ಟಿಸಿದ ‘ಮೋದಿ’ ಬಾಂಬ್!
ಇನ್ನೊಂದೆಡೆ, ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಸವಣ್ಣ ಬಗ್ಗೆ ಮಡಿದ ಸ್ಮರಣೆಯು ಕಾಂಗ್ರೆಸ್ ನಾಯಕರ ನಿದೆಗೆಡಿಸಿದೆ. ಮೋದಿಯವರು ಬಸವಣ್ಣನ ಗುಣಗಾನ ಮಾಡಿದ್ದರ ಹಿಂದಿನ ತಂತ್ರಗಾರಿಕೆ ಏನೆಂಬ ಬಗ್ಗೆ ಕೈ ಗರಡಿಯಲ್ಲಿ ಚಿಂತನ-ಮಂಥನ ನಡೆದಿದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಗಟ್ಟಿಗೊಳಿಸಲು ಹಾಗೂ ಲಿಂಗಾಯತ ಸಮುದಾಯಗಳನ್ನು ಹಿಡಿತದಲ್ಲಿಡುವ ರಣವ್ಯೂಹ ಮೋದಿಯದ್ದು ಎಂಬ ಊಹೆ ಕಾಂಗ್ರೆಸ್ಸಿಗರದ್ದು. ಅದು ನಿಜವೇ ಆಗಿದ್ದರೆ, ಇಂತಹಾ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿನ ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುವುದು ಅನುಮಾನ. ಯಾಕೆಂದರೆ, ರಾಜ್ಯದಲ್ಲಿ ಲಿಂಗಾಯತ ಸಮುದಾಯಕ್ಕೆ ಪರ್ಯಾಯವಾಗಿರುವ ಪ್ರಭಾವಿ ಸಮುದಾಯವೇ ಕುರುಬ ಸಮುದಾಯ. ಒಂದೊಮ್ಮೆ ಲಿಂಗಾಯತ ಸಮುದಾಯಕ್ಕೆ ನಾಯಕತ್ವ ಹಸ್ತಾಂತರ ಆದರೆ ಮಾತ್ರ ಮೋದಿ ಮಾತಿಗೆ ಕೌಂಟರ್ ಕೊಟ್ಟಂತಾಗಬಹುದು. ಆದರೆ, ಕರ್ನಾಟಕದಲ್ಲಿ ನಡೆಯುತ್ತಿರುವ ಚರ್ಚೆಯೇ ಬೇರೆ. ಈ ಪರಿಸ್ಥಿತಿಯಲ್ಲಿ ಒಕ್ಕಲಿಗ ನಾಯಕ ಡಿಕೆಶಿಗೆ ಗದ್ದುಗೆ ಒಪ್ಪಿಸಿದರೆ, ಲಿಂಗಾಯತ ಹಾಗೂ ಕುರುಬ ಸಮುದಾಯಗಳೆರಡೂ ಕಾಂಗ್ರೆಸ್ ಪಕ್ಷದಿಂದ ದೂರವಾಗಬಹುದು ಎಂಬ ಆತಂಕ ಕಾಂಗ್ರೆಸ್ಸಿಗರನ್ನು ಕಾಡತೊಡಗಿದೆ.
ಒಂದಂತೂ ಸತ್ಯ. ಸದ್ಯದಲ್ಲೇ ವಿಧಾನಸಭಾ ಅಧಿವೇಶನ ನಡೆಯಲಿದ್ದು, ಆ ಸಂದರ್ಭದಲ್ಲಿ, ಈ ವಿಚಾರದಿಂದ ಆಗಬಹುದಾದ ಮುಜುಗರದ ಸನ್ನಿವೇಶವನ್ನು ಕಾಂಗ್ರೆಸ್ ಪಕ್ಷ ಎದುರಿಸಲೇ ಬೇಕಿದೆ. ಈಗಿನ ಬೆಳವಣಿಗೆಗಳು ಸದನದಲ್ಲಿನ ಚರ್ಚೆಯ ವೇಳೆ ಕಾಂಗ್ರೆಸ್ಸಿಗೆ ಹಿನ್ನಡೆಯಾಗಲೂ ಬಹುದು.






















































