ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆ ನಡೆದಿರುವಾಗಲೇ, ರಾಜ್ಯ ರಾಜಕಾರಣದಲ್ಲಿ ಬಗೆ ಬಗೆಯ ಸುದ್ದಿಗಳೂ ಹರಿದಾಡುತ್ತಿವೆ. ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಬೇಸರಗೊಂಡು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಸೇರುವ ಸಾಧ್ಯತೆಗಳಿವೆ ಎಂದೂ, ಡಿಕೆಶಿ ಸಿಎಂ ಆಗಿ, ವಿಜಯೇಂದ್ರ ಡಿಸಿಎಂ ಆಗುವ ಸಾಧ್ಯತೆಗಳಿವೆ ಎಂಬ ಮಾತುಗಳೂ ಹರಿದಾಡುತ್ತಿವೆ.
ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹುಬ್ಬಳ್ಳಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಯಾವುದೇ ಉದ್ದೇಶ ಬಿಜೆಪಿಗೆ ಇಲ್ಲ ಎಂದಿದ್ದಾರೆ.
ಈ ಸರ್ಕಾರ 5 ವರ್ಷ ಅವಧಿಯನ್ನು ಪೂರ್ಣಗೊಳಿಸಬೇಕು ಎಂಬುದು ನಮ್ಮ ಆಶಯ. ಹಾಗಿರುವಾಗ ಯಾವುದೇ ಕಾರಣಕ್ಕೂ ಈ ಸರ್ಕಾರದ ಅಸ್ಥಿರತೆಯನ್ನು ನಾವು ಬಯಸುವುದಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಡಿಕೆಶಿ ಗುಂಪಿನ ಜೊತೆ ಸೇರಿಕೊಳ್ಳುವ ವಿಚಾರವಾಗಲೀ,
ಡಿಕೆಶಿಯನ್ನು ಸಿಎಂ ಮಾಡಿ ಬಿವೈ ವಿಜಯೇಂದ್ರರನ್ನು ಉಪಮುಖ್ಯಮಂತ್ರಿ ಮಾಡುವ ಪ್ರಯತ್ನವಾಗಲೀ ನಡೆದಿಲ್ಲ. ಅಂತಹ ಯಾವುದೇ ಯೋಚನೆ ನಮ್ಮ ಪಕ್ಷದ್ದಲ್ಲ ಎಂದು ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದ್ದಾರೆ.




















































