ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಕರ್ನಾಟಕ ರಾಜಕಾರಣ ಬಿರುಸಿನ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳಿ ಎಐಸಿಸಿ ನಾಯಕರೊಂದಿಗೆ ಚರ್ಚೆಯನ್ನೂ ನಡೆಸಿದ್ದಾರೆ. ನವೆಂಬರ್ ತಿಂಗಳಲ್ಲಿ ಕ್ರಾಂತಿ ನಡೆಯುವ ಸಾಧ್ಯತೆಗಳ ಬಗ್ಗೆ ಅನೇಕ ತಿಂಗಳುಗಳಿಂದ ನಡೆಯುತಿದ್ದ ಚರ್ಚೆಗೂ ಈ ಬೆಳವಣಿಗೆಗಳು ಪುಷ್ಟಿ ನೀಡಿವೆ.
ದೆಹಲಿ ಬೆಳವಣಿಗೆ ಬಗ್ಗೆ ಯಾವುದೇ ನಿಖರ ಮಾಹಿತಿ ಕೆಪಿಸಿಸಿ ಧುರೀಣರಿಗೆ ಸಿಕ್ಕಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಲು ಹೈಕಮಾಂಡ್ ಸಿದ್ಧವಿಲ್ಲ ಎಂಬ ಸೂಚನೆಯಂತೂ ಸಿಕ್ಕಿದೆ. ಅದರಲ್ಲೂ ಡಿಕೆಶಿ ಪಾಳಯದಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ ಎಂಬ ಬಿಜೆಪಿ ನಾಯಕರ ವಿಶ್ಲೇಷಣೆ ಮಾತ್ರ ಕುತೂಹಲಕಾರಿ ಸನ್ನಿವೇಶದತ್ತ ಬೊಟ್ಟು ಮಾಡುವಂತಿದೆ.
ಈ ನಡುವೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡುವ ಸಾಧ್ಯತೆಗಳ ಬಗ್ಗೆಯೂ ಮಾತುಗಳು ಹರಿದಾಡುತ್ತಿವೆ. ದೆಹಲಿ ಪ್ರವಾಸದ ಸಂದರ್ಭದಲ್ಲಿ ಕೇಳಿಬಂದ ಈ ರೀತಿಯ ಸುದ್ದಿಯನ್ನು ಡಿಕೆಶಿ ಅಲ್ಲಗಳೆದರಾದರೂ, ಬುಧವಾರ ಅವರಾಡಿರುವ ಮಾತುಗಳು ಅಂತಹ ಸುದ್ದಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಿದೆ.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಇಂದಿರಾ ಗಾಂಧಿ ಜನ್ಮದಿನ ಕಾರ್ಯಕ್ರಮದಲ್ಲಿ ಡಿಕೆಶಿ, “ನಾನು ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ’ ಎಂದಿರುವ ಮಾತುಗಳು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿವೆ.
“ನಾನು ಈ ಹುದ್ದೆಯಲ್ಲಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಈಗಾಗಲೇ ಐದೂವರೆ ವರ್ಷವಾಗಿದೆ, ಮಾರ್ಚ್ ಬಂದರೆ ಆರು ವರ್ಷವಾಗಲಿದೆ, ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಶಿವಕುಮಾರ್ ಪ್ರತಿಪಾದಿಸಿರುವ ವೈಖರಿಯೂ ಅನೇಕಾನೇಕ ಅರ್ಥಗಳನ್ನು ನೀಡುವಂತಿದೆ. ‘ನಾನು ನಾಯಕತ್ವದಲ್ಲಿ ಇರುತ್ತೇನೆ, ತಲೆಕೆಡಿಸಿಕೊಳ್ಳಬೇಡಿ. ನಾನು ಉಪಮುಖ್ಯಮಂತ್ರಿಯಾದ ದಿನವೇ ಈ ಹುದ್ದೆ ಬಿಡಬೇಕು ಎಂದು ನಿರ್ಧರಿಸಿದ್ದೆ’ ಎಂದು ಅವರು ತಿಳಿಸಿದರು.
ಈವರೆಗೂ ಈ ರಹಸ್ಯ ಬಹಿರಂಗಪಡಿಸಿದ ಅವರು, ಈಗ ನಾಯಕತ್ವ ಬದಲಾವಣೆ ಚರ್ಚೆಯ ಸಂದರ್ಭದಲ್ಲಿ ಹೇಳಿದ್ದರೂ ಏಕೆ? ಎಂಬ ಪ್ರಶ್ನೆ ಕಾರ್ಯಕರ್ತರನ್ನು ಕಾಡಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಇನ್ನೂ ಸ್ವಲ್ಪ ದಿನ ಮುಂದುವರಿಯಲು ಹೇಳಿದ್ದಾರೆ. ನಾನು ನನ್ನ ಕರ್ತವ್ಯ ನಿಭಾಯಿಸುತ್ತಿದ್ದೇನೆ” ಎಂದಿರುವ ಡಿಕೆಶಿ, ಇದೀಗ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವ ಮನಸ್ಸು ಮಾಡಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.





















































