“ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆ ಸದ್ಯದಲ್ಲೇ ನಡೆಯಲಿದೆ. ಕೂಡಲೇ ಮನೆ ಮನೆಗೆ ಹೋಗಿ ಖಾತಾ ಯೋಜನೆ, ಆಸ್ತಿ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಿಳಿಸಿ ಪ್ರಚಾರ ಮಾಡಬೇಕು” ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆಶಿ ಕರೆ
ಬೆಂಗಳೂರು: “ಇಂದಿರಾ ಗಾಂಧಿ ಅವರು ದೇಶದ ಮಹಿಳಾ ಶಕ್ತಿಯ ಚಿಹ್ನೆ. ದೇಶ ಪ್ರೇಮ, ದೃಢ ನಿಶ್ಚಯ, ಧೈರ್ಯದ ಪ್ರತೀಕವಾಗಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಬುಧವಾರ ನಡೆದ ಇಂದಿರಾ ಗಾಂಧಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಮಾತನಾಡಿದರು. “ದೇಶದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಜನ್ಮದಿನ ಆಚರಿಸುತ್ತಿದ್ದೇವೆ. ಇಂದು ಬೆಳಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಇಂದಿರಾ ಗಾಂಧಿ ಅವರ ಸಮಾಧಿಗೆ ಹೋಗಿ ಗೌರವ ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿ ಅವರು ನನನ್ನು ಕರೆದು ಅವರ ಸಮಾಧಿ ಸುತ್ತಮುತ್ತಲ ಜಾಗ ಅಭಿವೃದ್ಧಿ ಪಡಿಸಲು ಸೂಚಿಸಿದ್ದರು. ಜೊತೆಗೆ ಪೆರಂಬೂರಿನಲ್ಲಿರುವ ರಾಜೀವ್ ಗಾಂಧಿ ಅವರ ಸಮಾಧಿಗೆ ಗ್ರಾನೈಟ್ ಹಾಕುವ ಭಾಗ್ಯ ನನಗೆ ಸಿಕ್ಕಿದೆ. ನಾನು ಹಾಗೂ ನನ್ನ ಸಹೋದರ ನಮ್ಮದೇ ಕ್ವಾರೆಯಿಂದ ಗ್ರಾನೈಟ್ ಕಲ್ಲನ್ನು ತೆಗೆದುಕೊಂಡು ಹೋಗಿ ಅಲ್ಲಿ ಹಾಕಿ ನಮ್ಮ ಕೈಲಾದ ಸೇವೆ ಮಾಡುವ ಭಾಗ್ಯ ಸಿಕ್ಕಿತು” ಎಂದು ಸ್ಮರಿಸಿದರು.
“ಇಂದಿರಾ ಗಾಂಧಿ ಅವರ ಹತ್ಯೆಯಾದ ದಿನ ನಾವು ಯೂಥ್ ಕಾಂಗ್ರೆಸ್ ಸಮ್ಮೇಳನಕ್ಕಾಗಿ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದೆವು. ಇಂದಿರಾ ಗಾಂಧಿ ಅವರ ಹತ್ಯೆ ಹಿನ್ನೆಲೆಯಲ್ಲಿ ರೈಲು ಅರ್ಧದಾರಿಯಲ್ಲೇ ನಿಂತಿತು. ಆಗ ನಾನು ಪ್ರವಾಸಿ ಚಿತ್ರಮಂದಿರ ಆರಂಭಿಸಲು ಅರ್ಜಿ ಹಾಕಿದ್ದೆ. ಅದಕ್ಕೆ ನಾನು ಇಂದಿರಾ ಜೀ ಚಿತ್ರಮಂದಿರ ಎಂದು ಹೆಸರಿಟ್ಟೆ. ಇಂದಿರಾ ಗಾಂಧಿ ಅವರ ನಿಧನದ ನಂತರ ರಾಜೀವ್ ಗಾಂಧಿ ಅವರು ನಾಯಕತ್ವ ವಹಿಸಿದರು. ನನಗೆ ಹಾಗೂ ವಿನಯ್ ಕುಮಾರ್ ಸೊರಕೆ ಅವರು ವಿದ್ಯಾರ್ಥಿ ನಾಯಕರಾಗಿದ್ದೆವು” ಎಂದು ಮೆಲುಕು ಹಾಕಿದರು.
“ಇನ್ನು ಮಾಲೀನ್ಯ ನಿಯಂತ್ರಣ ಮಂಡಳಿಗಳನ್ನು ಆರಂಭಿಸಿದ್ದು, ಇಂದಿರಾ ಗಾಂಧಿ ಅವರು. ಅಂಗನವಾಡಿ ಆರಂಭಿಸಿದರು. ದೇಶದಲ್ಲಿ ಅಂಗನವಾಡಿ ಕಾರ್ಯಕರ್ತರ ನೇಮಕ ಮಾಡಿದ್ದು ಇಂದಿರಾ ಗಾಂಧಿ ಅವರು. ವೃದ್ಧಾಪ್ಯ, ವಿಧವಾ ಪಿಂಚಣಿ ಕೊಟ್ಟಿದ್ದು ಇಂದಿರಾ ಗಾಂಧಿ ಅವರು. ಅವರ ಯೋಜನೆಗಳನ್ನು ಯಾವುದೇ ಸರ್ಕಾರ ಬಂದರೂ ನಿಲ್ಲಿಸಲು ಸಾಧ್ಯವಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ಆಹಾರ ಭದ್ರತಾ ಕಾಯ್ದೆ, ಮಾಹಿತಿ ಹಕ್ಕು, ಶೈಕ್ಷಣಿಕ ಹಕ್ಕು, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು 371ಜೆ ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಕೃಷ್ಣ ಆವರ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಲಾಲ ಕೃಷ್ಣಾ ಆಡ್ವಾಣಿ ಅವರು ಇದು ಸಾಧ್ಯವಿಲ್ಲ ಎಂದು ಬರೆದರು.ಆದರೆ ಕಾಂಗ್ರೆಸ್ ಸರ್ಕಾರ ಸಂವಿಧಾನದ ಮೂಲಕ ಜಾರಿಗೆ ತಂದಿತು” ಎಂದರು.
ಸಂಘಟನೆಗೆ ದುಡಿದ ಕಾರ್ಯಕರ್ತರಿಗೆ ಅಧಿಕಾರ ಕೊಟ್ಟಿದ್ದೇವೆ
“ನಮ್ಮ ನಾಯಕರು ಮತಕಳ್ಳತನದ ಬಗ್ಗೆ ಹೋರಾಟ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲೂ ಸಹಿ ಸಂಗ್ರಹ ಅಭಿಯಾನ ಮಾಡಿದ್ದೇವೆ. ಬಿಹಾರ, ಮಹಾರಾಷ್ಟ್ರ ಚುನಾವಣೆಗಳಲ್ಲಿ ಏನು ಹೆಚ್ಚುಕಮ್ಮಿಯಾಗಿದೆ ಎಂದು ಜನ ಚರ್ಚೆ ಮಾಡುತ್ತಿದ್ದಾರೆ. ಎಲ್ಲದಕ್ಕೂ ಕೊನೆ ಎಂಬುದು ಇದ್ದೇ ಇರುತ್ತದೆ. ನಾನು ಎಲ್ಲಿರುತ್ತೇನೆ ಎಂಬುದು ಮುಖ್ಯವಲ್ಲ. ಈ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ನೀವು ನಿಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ, ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ. ಅನೇಕ ನಿಗಮಮಂಡಳಿ ನಿರ್ದೇಶಕರ ಪಟ್ಟಿ ಸಿದ್ಧವಾಗಿದ್ದು, ಮರುಪರಿಶೀಲನೆ ಮಾಡಿಸಿ, ಬ್ಲಾಕ್ ಅಧ್ಯಕ್ಷರಿಗೆ ಅಧಿಕಾರ ಕೊಡಬೇಕಾಗಿದೆ. ಪಕ್ಷದ ಸದಸ್ಯತ್ವ ನೋಂದಣಿಯಲ್ಲಿ ಹೆಚ್ಚು ಸಹಿ ಸದಸ್ಯತ್ವ ಮಾಡಿಸಿದ ಹೊಳಲ್ಕೆರೆಯ ಸವಿತಾ ಎಂಬಾಕೆಗೆ ಅಧ್ಯಕ್ಷ ಸ್ಥಾನ ಕೊಡಿಸಿದ್ದೆ. ಆಕೆ ಅಧಿಕಾರವನ್ನು ತನ್ನ ಗಂಡನಿಗೆ ಬಿಟ್ಟುಕೊಟ್ಟಿದ್ದಾಳೆ. ಅದಕ್ಕಾಗಿ ಎನ್ಎಸ್ ಯುಐ, ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದವರಿಗೆ ಅವಕಾಶ ನೀಡಿದ್ದೇವೆ. ಕಾರ್ಯಕರ್ತರಿಗೆ ಅಧಿಕಾರ ನೀಡಿದ್ದೇವೆ. ಗ್ಯಾರಂಟಿ ಸಮಿತಿಗಳ ಮೂಲಕ ಪ್ರತಿ ಸಮಿತಿಯಲ್ಲಿ 15 ಕಾರ್ಯಕರ್ತರಿಗೆ ಅಧಿಕಾರ ನೀಡಿದ್ದೇವೆ. ಇಡೀ ದೇಶದಲ್ಲಿ ಕಾರ್ಯಕರ್ತರಿಗೆ ಈ ರೀತಿ ಅಧಿಕಾರ ನೀಡಿರುವುದು ನಮ್ಮಲ್ಲಿ ಮಾತ್ರ” ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಿ:
“ರಾಜಕೀಯದಲ್ಲಿ 33% ಮೀಸಲಾತಿ ಬರುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ನಾವು ಮಹಿಳಾ ನಾಯಕತ್ವವನ್ನು ಬೆಳೆಸಬೇಕು. ನಾಯಕರನ್ನು ಸೃಷ್ಟಿಸುವವನೇ ನಿಜವಾದ ನಾಯಕ. ನಾಯಕರ ಕುಟುಂಬದವರನ್ನು ನಾಯಕರಾಗಿ ಬೆಳೆಯುವುದು ಮುಖ್ಯವಲ್ಲ, ಹೊಸ ಪ್ರತಿಭೆಗಳನ್ನು ಗುರುತಿಸಿ ಬೆಳೆಸಬೇಕು. ಬೆಂಗಳೂರಿನಲ್ಲಿ ಜಿಬಿಎ ಮೂಲಕ 369 ವಾರ್ಡ್ ಗಳನ್ನು ಮಾಡಲಾಗಿದ್ದು, ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಜೊತೆಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆ ನಡೆಯಲಿದೆ. ಪಾಲಿಕೆ ಚುನಾವಣೆಯ ವಾರ್ಡ್ ಮೀಸಲಾತಿ ಪಟ್ಟಿ ಇಂದು ಬಿಡುಗಡೆಯಾಗಲಿದೆ. ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವವರಿಗೆ ಅರ್ಜಿ ಕರೆಯಲಾಗುವುದು. ಈಗ ಹೊಸ ಮತದಾರರ ಪಟ್ಟಿ ರಚನೆಯಾಗಲಿದೆ. ಕೂಡಲೇ ಮನೆ ಮನೆಗೆ ಹೋಗಿ ಖಾತಾ ಯೋಜನೆ, ಆಸ್ತಿ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಿಳಿಸಿ ಪ್ರಚಾರ ಮಾಡಬೇಕು” ಎಂದು ಕರೆ ನೀಡಿದರು.
“ಸಧ್ಯದಲ್ಲಿ ನೂರು ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದಕ್ಕೆ ಯಾರು ಸಹಕಾರ ನೀಡಿದ್ದಾರೆ, ನೀಡಿಲ್ಲ ಎಂದು ಪಟ್ಟಿ ನೀಡಿ ಎಂದು ಎಐಸಿಸಿ ನಾಯಕರು ತಿಳಿಸಿದ್ದಾರೆ. ಕೆಲವರು ಆಸಕ್ತಿ ತೋರಿದ್ದಾರೆ, ಕೆಲವರು ಆಸಕ್ತಿ ತೋರಿಲ್ಲ. ಕೆಲವರಿಗೆ ಕೇವಲ ಅಧಿಕಾರ ಮಾತ್ರ ಬೇಕು. ಈ ಕಾಂಗ್ರೆಸ್ ಕಚೇರಿ ದೇವಾಲಯ ಎಂಬುದನ್ನು ಕೆಲವರು ಮರೆತಿದ್ದಾರೆ. ಇದಕ್ಕೆ ನಾನು ಉತ್ತರ ನೀಡುವುದಿಲ್ಲ. ದೆಹಲಿ ನಾಯಕರು ಸರಿಯಾದ ಸಮಯದಲ್ಲಿ ಉತ್ತರ ನೀಡುತ್ತಾರೆ. ನಾನು ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ. ನಾನು ಅವಧಿಯಲ್ಲಿ ನೂರು ಕಾಂಗ್ರೆಸ್ ಕಚೇರಿ ಮಾಡಬೇಕು ಎಂಬುದು ನನ್ನ ಬಯಕೆ. ಈ ಸಂದರ್ಭದಲ್ಲಿ ಗಾಂಧಿ ಭಾರತ ಎಂಬ ಪುಸ್ತಕ ಬಿಡುಗಡೆ ಮಾಡಿಸಲಾಗುವುದು. ನೂರು ವರ್ಷಗಳ ಹಿಂದೆ ಗಾಂಧಿಜಿ ಅವರ ಅಧ್ಯಕ್ಷತೆಯಡಿ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಕಾರ್ಯಕ್ರಮದ ದಾಖಲೆ ಆಧರಿಸಿ ಹಾಗೂ ನಮ್ಮ ಕಾರ್ಯಕ್ರಮಗಳನ್ನೂ ಸೇರಿಸಿ ಪುಸ್ತಕ ರಚಿಸಲಾಗಿದೆ” ಎಂದು ತಿಳಿಸಿದರು.
ಉಪಮುಖ್ಯಮಂತ್ರಿಯಾದ ದಿನವೇ ಅಧ್ಯಕ್ಷ ಸ್ಥಾನ ತೊರೆಯಲು ನಿರ್ಧರಿಸಿದ್ದೆ:
“ನಾನು ಈ ಹುದ್ದೆಯಲ್ಲಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಈಗಾಗಲೇ ಐದೂವರೆ ವರ್ಷವಾಗಿದೆ, ಮಾರ್ಚ್ ಬಂದರೆ ಆರು ವರ್ಷವಾಗಲಿದೆ. ಬೇರೆಯವರಿಗೆ ಅವಕಾಶ ನೀಡಬೇಕು. ನಾನು ನಾಯಕತ್ವದಲ್ಲಿ ಇರುತ್ತೇನೆ, ತಲೆಕೆಡಿಸಿಕೊಳ್ಳಬೇಡಿ. ನಾನು ಉಪಮುಖ್ಯಮಂತ್ರಿಯಾದ ದಿನವೇ ಈ ಹುದ್ದೆ ಬಿಡಬೇಕು ಎಂದು ನಿರ್ಧರಿಸಿದ್ದೆ. ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರು ಇನ್ನು ಸ್ವಲ್ಪ ದಿನ ಮುಂದುವರಿಯಲು ಹೇಳಿದ್ದಾರೆ. ನಾನು ನನ್ನ ಕರ್ತವ್ಯ ನಿಭಾಯಿಸುತ್ತಿದ್ದೇನೆ” ಎಂದು ತಿಳಿಸಿದರು.























































