ಬೆಂಗಳೂರು: ಕ್ರಿಶ್ಚಿಯನ್ ಧರ್ಮದ ಪ್ರಮುಖ ಸಂಸ್ಥೆ CSIನಲ್ಲಿ ಪ್ರಮುಖ ಸ್ಥಾನ ಹೊಂದಿರುವ ಹಾಗೂ ಅವರ ತಂದೆ ಜಯರಾಜ್ ವಿರುದ್ಧದ ವಿವಾದ ಇದೀಗ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಂಗಳಕ್ಕೆ ಜಿಗಿದಿದೆ. ಕ್ರಿಶ್ಚಿಯನ್ ಧರ್ಮದ ಪ್ರಮುಖ ಹುದ್ದೆಯನ್ನು ಪಡೆಯುವ ಸಲುವಾಗಿ ಈ ಕ್ರಿಶ್ಚಿಯನೇತರ ವ್ಯಕ್ತಿಗಳು ನಕಲಿ ಜಾತಿ ಮುಂದಿಟ್ಟಿದ್ದಾರೆ. ಇದನ್ನು ಪ್ರಶ್ನಿಸಿದರೆ ಹಣಬಲ, ಪೊಲೀಸ್ ಬಲ ಪ್ರಯೋಗಿಸುತ್ತಾರೆ ಎಂದು ಬೆಂಗಳೂರಿನ ಕಾಕ್ಸ್‌ಟೌನ್‌ನ ಸೇಂಟ್ ಪೀಟರ್ ತಮಿಳು ಚರ್ಚ್‌ನ ಭಕ್ತರಾದ ಮೋಸೆಸ್ ಎಂಬವರು ಹೈಕೋರ್ಟ್ ಸಿಜೆ, ಕರ್ನಾಟಕ ಸರ್ಕಾರದ ಗೃಹ ಇಲಾಖೆ, ಕಾನೂನು ಇಲಾಖೆ ಹಾಗೂ ಪ್ರಾಸಿಕ್ಯೂಷನ್’ಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ. ಅವರ ವಿರುದ್ದ ಹಲವು ದೂರುಗಳಿದ್ದು ಈ ಆರೋಪಗಳ ಬಗ್ಗೆ ತನಿಖೆಗೆ ನಿರ್ದೇಶನ ನೀಡಬೇಕೆಂದು ಮೋಸೆಸ್ ಮನವಿ ಮಾಡಿದ್ದಾರೆ.
ಜಯರಾಜ್ ಮತ್ತು ಅವರ ಪುತ್ರ ವಿನೋದ್ ದಾಸನ್ ಅವರು ಕ್ರಿಶ್ಚಿಯನ್ ಧರ್ಮದವರಲ್ಲ. ಪರಿಶಿಷ್ಟ ಸಮುದಾಯಕ್ಕೆ ಸೇರಿರುವ ಇವರ ಕುಟುಂಬದವರು ತಾವು ಕ್ರಿಶ್ಚಿಯನ್ ಎಂಬಂತೆ ಬಿಂಬಿಸಿ ಸುಳ್ಳು ದಾಖಲೆಗಳನ್ನು ಸಲ್ಲಿಸಿದ್ದಾರೆ. ಈಮೂಲಕ ಕಾಕ್ಸ್‌ಟೌನ್‌ನ ಸೇಂಟ್ ಪೀಟರ್ ತಮಿಳು ಚರ್ಚ್‌ನ ಕಾರ್ಯದರ್ಶಿ ಹಾಗೂ ಪ್ರಮುಖ ಹುದ್ದೆ ಅಲಂಕರಿಸಿದ್ದಾರೆ. ಇದನ್ನು ಪತ್ತೆ ಹಚ್ಚಿರುವ ಅದೇ ಚರ್ಚಿನ ಸದಸ್ಯ ಮೋಸೆಸ್ ಈ ಪ್ರಮುಖರ ವಿರುದ್ಧ ದೂರು ನೀಡಿದ್ದರು. ಇದರಿಂದ ಆತಂಕಗೊಂಡ ಜಯರಾಜ್ ಮತ್ತು ವಿನೋದ್ ದಾಸನ್ ಅವರು ಪುಲಿಕೇಶೀ ನಗರ ಠಾಣೆಯ ಪೊಲೀಸರ ಮೂಲಕ ತನ್ನ ವಿರುದ್ಧ ಸುಳ್ಳು ದೂರು ದಾಖಲಿಸಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಮೋಸೆಸ್ ಆರೋಪಿಸಿದ್ದಾರೆ.
ಜಯರಾಜ್ ಪತ್ನಿಯರನ್ನು ಹೊಂದಿರುವುದರಿಂದ CSI ನಿಯಮಾನುಸಾರ ಅವರು ಚರ್ಚ್’ನ ಪ್ರಮುಖ ಹುದ್ದೆಯನ್ನು ಅಲಂಕರಿಸಲು ಅವಕಾಶವಿಲ್ಲ. ಅಷ್ಟೇ ಅಲ್ಲ,ಕ್ರಿಶ್ಚಿಯನ್ ಅಲ್ಲವಾಗಿರುವುದರಿಂದ ಅವರನ್ನು ಚರ್ಚಿನ ಹುದ್ದೆಗಳಿಂದ ಕೈಬಿಡಬೇಕೆಂದು ತಾನು ಸುದೀರ್ಘ ಹೋರಾಟ ನಡೆಸಿದ್ದೇನೆ. ನನ್ನ ಹೋರಾಟಕ್ಕೆ ಅಡ್ಡಿ ಪಡಿಸುವ ದುರುದ್ದೇಶದಿಂದ ತನ್ನ ವಿರುದ್ಧ 2016ರಲ್ಲಿ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಆರೋಪ ಹೊರಿಸಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಮೇಲೆ ಒತ್ತಡ ಹೇರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರೂ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಇನ್ನೇನು ತಮ್ಮ ಮೇಲಿನ ಆರೋಪ ಸಾಬೀತಾಗುತ್ತದೆ ಎಂಬ ಭಯದಿಂದ ಆ ಪ್ರಕರಣವನ್ನು ವಿನೋದ್ ದಾಸ್ ರವರು 2023ರಲ್ಲಿ ವಾಪಾಸ್ ಪಡೆದಿದ್ದಾರೆ.
‘ವಿನೋದ್ ದಾಸನ್ ನನ್ನ ವಿರುದ್ಧ ವಿವಿಧ ಸಿಸಿ ಸಂಖ್ಯೆಗಳು ಸಿ.ಸಿ ಸಂಖ್ಯೆ 50311/2016, ಸಿ.ಸಿ ಸಂಖ್ಯೆ 51150/2017 ಮತ್ತು ಸಿ.ಸಿ ಸಂಖ್ಯೆ 2793/2021 ರಲ್ಲಿ ವಿವಿಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ ಮತ್ತು ಈ ಎಲ್ಲಾ ಪ್ರಕರಣಗಳು ಚರ್ಚ್ ಚುನಾವಣೆಗಳ ಭಾಗವಾಗಿ ಮತ್ತು ಚರ್ಚ್‌ನ ಆಡಳಿತದಲ್ಲಿನ ಸ್ಥಾನಗಳನ್ನು ಪಡೆಯಲು ಹಾಗೂ ಎಸ್‌ಸಿ/ಎಸ್‌ಟಿ ಹಿನ್ನೆಲೆ ಬಗ್ಗೆ ಪ್ತ್ರಶ್ನಿಸಿರುವವವರ ವಿರುದ್ಧ ದ್ವೇಷದ ಹಿನ್ನೆಲೆಯಲ್ಲಿ ಹಾಕಲಾಗಿರುವ ಪ್ರಕರಣಗಳಾಗಿವೆ’ ಎಂದು ಮೋಸೆಸ್ ಗಮನಸೆಳೆದಿದ್ದಾರೆ.
ಇದೇ ವೇಳೆ, ಚರ್ಚ್ ಅವ್ಯವಹಾರ ಕುರಿತು ಸುಳ್ಳು ಆರೋಪ ಹೊರಿಸಿ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ.27/2018 ರಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಆ ಅಕ್ರಮದಲ್ಲಿ ಸೇಂಟ್ ಪೀಟರ್ ತಮಿಳು ಚರ್ಚ್‌ನ ಕಾರ್ಯದರ್ಶಿಯಾಗಿದ್ದ ಜಯರಾಜ್ ಅವರನ್ನು ರಕ್ಷಿಸಲು ವಿನೋದ್ ದಾಸನ್ ಅವರು, ಪಾದ್ರಿ ರೆವರೆಂಡ್ ಥಿಯೋಡರ್ ವಿಲಿಯಂ, ಸ್ಟಿಫನ್ ಹಾಗೂ ತನ್ನನ್ನು ಆ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಚಾರ್ಜ್‌ಶೀಟ್ ಕೂಡಾ ಸಲ್ಲಿಸಿದ್ದರು. ಆದರೆ, CSI ಚುನಾವಣೆಯಲ್ಲಿ ಹೊಂದಾಣಿಕೆ ಮಾಡುವ ದುರುದ್ದೇಶದಿಂದ ಪ್ರಮುಖ ಆರೋಪಿ ರೆವರೆಂಡ್ ಥಿಯೋಡರ್ ವಿಲಿಯಂರನ್ನು ಪ್ರಕರಣದಿಂದ ಕೈಬಿಡಲು ಮುಂದಾದರು. ಪ್ರಮುಖ ಆರೋಪಿ ಮತ್ತು ದೂರುದಾರರು ಒಳಒಪ್ಪಂದ ಮಾಡಿಕೊಂಡು ನ್ಯಾಯಾಲಯಕ್ಕೆ ಸಂಧಾನದ ಅರ್ಜಿ ಸಲ್ಲಿಸಿ ರಾಜಿ ಮಾಡಿಸಿಕೊಂಡಿದ್ದಾರೆ. ಗಂಭೀರ ದೋಷಾರೋಪ ಇದ್ದರೂ ಆ ಪ್ರಕ್ರಿಯೆಗೆ ಪ್ರಾಸಿಕ್ಯೂಷನ್ ಆಕ್ಷೇಪವ್ಯಕ್ತಪಡಿಸದ ನಡೆಯೂ ಅನುಮಾನಕ್ಕೆ ಕಾರಣವಾಗಿದೆ. ಪ್ರಮುಖ ಆರೋಪಿಯನ್ನು ಮಾತ್ರ ನಿರ್ದೋಷಿಯನ್ನಾಗಿಸಿ ಇನ್ನುಳಿದ ನಿರಪರಾಧಿಗಳ ಮೇಲೆ ವಿಚಾರಣೆ ಮುಂದುವರಿಸುವ ಉದ್ದೇಶವನ್ನು ಪ್ರಾಸಿಕ್ಯೂಷನ್ ಹೊಂದಿದೆ. ಈ ರೀತಿಯ ಬೆಳವಣಿಗೆ ನ್ಯಾಯಾಂಗದ ಪಾವಿತ್ರ್ಯಕ್ಕೂ ಸವಾಲಾಗಿದೆ ಎಂದು ಮೋಸೆಸ್ ಆರೋಪಿಸಿದ್ದಾರೆ.
ಈ ಸಂಗತಿಗಳ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ಸಲ್ಲಿಸಿರುವ ದೂರಿನಲ್ಲಿ ಮೋಸೆಸ್ ಗಮನಸೆಳೆದಿದ್ದಾರೆ. ಸುಳ್ಳು ದೂರುಗಳನ್ನು ನೀಡುತ್ತಾ, ಹಣ – ಪೊಲೀಸ್ ಅಧಿಕಾರ ದುರುಪಯೋಗಪಡಿಸುತ್ತಾ, ಬ್ಲಾಕ್ ಮಾಡುತ್ತಾ ಕ್ರೈಸ್ತ ಧರ್ಮದ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ವಿನೋದ್ ದಾಸನ್ ಹಾಗೂ ಜಯರಾಜ್ ಬಗ್ಗೆ ನಿಸ್ಪಕ್ಷಪಾತ ತನಿಖೆಗೆ ನಿರ್ದೇಶನ ನೀಡಬೇಕೆಂದು ಅವರು ಸಿಜೆಗೆ ಮನವಿ ಮಾಡಿದ್ದಾರೆ. ಈ ಪ್ರಕರಣಗಳಲ್ಲಿ ಪೊಲೀಸರ ಅಕ್ರಮಗಳ ಬಗ್ಗೆ ಹಾಗೂ ಪ್ರಾಸಿಕ್ಯೂಷನ್ ಅಧಿಕಾರಿಗಳ ಶಾಮೀಲು ಬಗ್ಗೆಯೂ ತನಿಖೆ ನಡೆಸಬೇಕಿದೆ ಎಂದು ಪ್ರತಿಪಾದಿಸಿರುವ ಮೋಸೆಸ್, ಕಾನೂನು ಇಲಾಖೆ, ಗೃಹ ಇಲಾಖೆ ಹಾಗೂ ಪ್ರಾಸಿಕ್ಯೂಷನ್ ಕಾರ್ಯದರ್ಶಿಗಳಿಗೂ ಮನವಿ ಸಲ್ಲಿಸಿದ್ದಾರೆ.























































