ಉಜ್ಜಯಿನಿ: ಉಜ್ಜಯಿನಿ ನಗರದ ಟೋಪ್ಖಾನಾ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಪಥಸಂಚಲನಕ್ಕೆ ಸ್ವಾಗತ ನೀಡಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ವಕ್ಫ್ ಮಂಡಳಿಯ ಇಬ್ಬರು ಮೇಲ್ದರ್ಜೆಯ ಅಧಿಕಾರಿಗಳಿಗೆ ಆನ್‌ಲೈನ್‌ನಲ್ಲಿ ಶಿರಚ್ಛೇದ ಬೆದರಿಕೆಗಳು ವ್ಯಕ್ತವಾಗಿದ್ದು, ಘಟನೆ ಗಂಭೀರ ರೂಪ ಪಡೆದುಕೊಂಡಿದೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಕ್ಟೋಬರ್‌ನಲ್ಲಿ ನಡೆದ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಮಾರ್ಗಮಧ್ಯೆ ಅನೇಕ ಸ್ವಾಗತ ಕೇಂದ್ರಗಳನ್ನು ಹಾಕಲಾಗಿತ್ತು. ವಕ್ಫ್ ಮಂಡಳಿಯೂ ತನ್ನ ವತಿಯಿಂದ ಒಂದು ಸ್ವಾಗತ ವೇದಿಕೆಯನ್ನು ನಿರ್ಮಿಸಿತ್ತು. ಈ ದೃಶ್ಯಾವಳಿಯನ್ನು ಮಂಡಳಿ ಅಧ್ಯಕ್ಷ ಡಾ. ಸನ್ವರ್ ಪಟೇಲ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಬಳಿಕ ವಿವಾದ ಉಂಟಾಗಿದೆ. ಕೆಲವು ಮೂಲಭೂತವಾದಿಗಳು ಈ ಕ್ರಮವನ್ನು ಟೀಕಿಸಿ, ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ, ದೂರು ಮತ್ತು ಜೀವಬೆದರಿಕೆಗಳನ್ನು ಹರಿಸಿದರೆಂದು ಅವರು ದೂರಿದ್ದಾರೆ.
ಡಾ. ಪಟೇಲ್ ಹೇಳುವಂತೆ, ನಿರ್ದಿಷ್ಟ ಸಮುದಾಯದ ಕೆಲವರು ಫೇಸ್‌ಬುಕ್, ಇನ್‌ಸ್ಟಾಗ್ರಾಂ ವೇದಿಕೆಗಳನ್ನು ದುರುಪಯೋಗಪಡಿಸಿಕೊಂಡು, ತಮ್ಮ ಮತ್ತು ಮಂಡಳಿ ನಿರ್ದೇಶಕ ಫೈಜಾನ್ ಖಾನ್ ಅವರ ‘ಶಿರಚ್ಛೇದನ’ಕ್ಕೆ ಕರೆ ನೀಡುವ ಮಟ್ಟಿಗೆ ಅಕ್ರಮ ಚಟುವಟಿಕೆ ನಡೆಸಿದೆ ಎಂದು ದೂರಿದ್ದಾರೆ. “ಪಾಕಿಸ್ತಾನಿ ಕಾರ್ಯಸೂಚಿ ಭಾರತದಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲಎಂದೂ ಅವರು ಪ್ರತಿಪಾದಿಸಿದ್ದಾರೆ.
ಈ ಬೆಳವಣಿಗೆ ಬಗ್ಗೆ ವಕ್ಫ್ ಮಂಡಳಿ ನಿರ್ದೇಶಕ ಫೈಜಾನ್ ಖಾನ್ ಮಹಾಕಾಲ್ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿ, ಬೆದರಿಕೆ ಹಾಕಿದ ಇನ್‌ಸ್ಟಾಗ್ರಾಂ ಖಾತೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.























































