ಮೈಸೂರು: ಪ್ರಮುಖ ಶಿಕ್ಷಣ ಸಂಸ್ಥೆಯ ಉಪನ್ಯಾಸಕರೊಬ್ಬರ ವಿರುದ್ಧ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಪ್ರಕರಣ ದಾಖಲಾಗಿದೆ. ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಈ ಎಫ್‌ಐಆರ್ ದಾಖಲಿಸಲಾಗಿದೆ.
ಆರೋಪಿಯನ್ನು ಭರತ್ ಭಾರ್ಗವ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 126(2) (ತಪ್ಪಾದ ಸಂಯಮ), 75(2) (ಲೈಂಗಿಕ ಕಿರುಕುಳ) ಮತ್ತು 351(2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರೀಕ್ಷೆಯಲ್ಲಿ ಉತ್ತಮ ಅಂಕಗಳ ಭರವಸೆಯ ಜೊತೆಗೆ ಉತ್ತಮ ಉದ್ಯೋಗ ದೊರಕಿಸಲು ಸಹಾಯ ಮಾಡುವ ನೆಪದಲ್ಲಿ ಉಪನ್ಯಾಸಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ತನ್ನ ಅನುಚಿತ ವರ್ತನೆಗೆ ಪ್ರಶ್ನೆ ಮಾಡಿದಾಗ, “ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಉಪನ್ಯಾಸಕರು ಬೆದರಿಕೆ ಹಾಕಿದರೆಂದು ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುವ ಬೆದರಿಕೆ ನೀಡಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪವೂ ಇದೆ. ವಿದ್ಯಾರ್ಥಿನಿ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾಳೆ.























































