ಆಪಲ್ ಕಂಪನಿಯ ಹೊಸ ಪೀಳಿಗೆಯ ‘ಐಫೋನ್ 18 ಏರ್’ ಕುರಿತ ಸೋರಿಕೆಗಳು ತಂತ್ರಜ್ಞಾನ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿವೆ. ಅತ್ಯಂತ ತೆಳ್ಳನೆಯ ವಿನ್ಯಾಸದೊಂದಿಗೆ ಬಂದಿದ್ದ ಐಫೋನ್ ಏರ್‌ಗೆ ಇದೀಗ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಸೇರಲಿದ್ದು, ಇದು ಛಾಯಾಗ್ರಹಣ ಪ್ರಿಯರಿಗೆ ಆಕರ್ಷಣೆಯ ಕೇಂದ್ರವಾಗುವ ನಿರೀಕ್ಷೆಯಿದೆ.
ಹಿಂದಿನ ವರ್ಷ ಬಿಡುಗಡೆಯಾದ ಐಫೋನ್ ಏರ್ ಸಂಪೂರ್ಣವಾಗಿ ಸ್ಲಿಮ್ ವಿನ್ಯಾಸದತ್ತ ಕೇಂದ್ರೀಕರಿಸಿತ್ತು. ಮಾರಾಟ ನಿರೀಕ್ಷೆಗಿಂತ ಕಡಿಮೆ ಇದ್ದರೂ, ಆಪಲ್ ಈ ಸರಣಿಯನ್ನು ಮುಂದುವರಿಸಲು ನಿರ್ಧರಿಸಿದೆ. ಹೊಸ ಮಾದರಿಯಲ್ಲಿ ಕಂಪನಿ ಪ್ರಮುಖ ಬದಲಾವಣೆಯೊಂದನ್ನು ತರುವ ಸಾಧ್ಯತೆ ಇದೆ.
ಟೆಕ್ ವಿಶ್ಲೇಷಕ ಡಿಜಿಟಲ್ ಚಾಟ್ ಸ್ಟೇಷನ್ ನೀಡಿರುವ ಮಾಹಿತಿ ಪ್ರಕಾರ, ಹೊಸ ಪೀಳಿಗೆಯ ಐಫೋನ್ ಏರ್‌ನಲ್ಲಿ 48-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜೊತೆಗೆ 48-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಇರಬಹುದು. ಈ ಬದಲಾವಣೆ ಐಫೋನ್ ಏರ್ ಸರಣಿಯ ಪ್ರಮುಖ ಅಪ್‌ಗ್ರೇಡ್ ಆಗಿ ಪರಿಗಣಿಸಲಾಗುತ್ತಿದೆ.
ಸೋರಿಕೆಯಾಗಿರುವ ಚಿತ್ರದಲ್ಲಿ ಹೊಸ ‘ಐಫೋನ್ ಏರ್’ ಮೂಲ ವಿನ್ಯಾಸದಂತೆಯೇ ಇದ್ದು, ಕ್ಯಾಮೆರಾ ವಿಭಾಗದಲ್ಲಿ ಎರಡನೇ ಲೆನ್ಸ್ ಸ್ಪಷ್ಟವಾಗಿ ಕಾಣುತ್ತದೆ. ಆದರೆ ಈ ಚಿತ್ರ ಕೇವಲ ಕಲ್ಪಿತ ವಿನ್ಯಾಸವಾಗಿದ್ದು, ಅಂತಿಮ ರೂಪ ಬೇರೆಯಿರಬಹುದು.
ಹೊಸ ಐಫೋನ್ ಏರ್‌ನಲ್ಲಿ 6.5 ಇಂಚಿನ OLED ಡಿಸ್ಪ್ಲೇ, ಪ್ರೊಮೋಷನ್ ತಂತ್ರಜ್ಞಾನ ಹಾಗೂ ಫೇಸ್‌ಐಡಿ ಬೆಂಬಲ ಇರಲಿದೆ ಎಂದು ಅಂದಾಜಿಸಲಾಗಿದೆ. ಹಿಂದಿನ ಮಾದರಿಯಂತೆ ಅತೀ ತೆಳ್ಳನೆಯ ಫ್ರೇಮ್ (ಸುಮಾರು 5.6 ಮಿಮೀ) ಇರುವಂತಿದೆ.
ಐಫೋನ್ 18 ಶ್ರೇಣಿಗಾಗಿ ಆಪಲ್ A20 ಮತ್ತು A20 ಪ್ರೊ ಚಿಪ್‌ಸೆಟ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಹೊಸ ಏರ್ ಮಾದರಿ A20 ಪ್ರೊ ಚಿಪ್‌ನೊಂದಿಗೆ ಬರಬಹುದು. ಇದರಿಂದ ಕಾರ್ಯಕ್ಷಮತೆ ಹಾಗೂ ಶಕ್ತಿ ಬಳಕೆ ಎರಡರಲ್ಲಿಯೂ ಸುಧಾರಣೆ ಕಾಣುವ ನಿರೀಕ್ಷೆಯಿದೆ.
ಬೆಲೆ ಎಷ್ಟಿರಬಹುದು?
ಮೂಲಗಳ ಪ್ರಕಾರ, ಐಫೋನ್ ಏರ್ 2 (ಅಥವಾ ಐಫೋನ್ 18 ಏರ್) 2026ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಆ ಸಂದರ್ಭದಲ್ಲೇ ಐಫೋನ್ 18 ಪ್ರೊ, 18 ಪ್ರೊ ಮ್ಯಾಕ್ಸ್ ಹಾಗೂ ಆಪಲ್‌ನ ಮೊದಲ ಮಡಿಸಬಹುದಾದ ಫೋನ್ (Apple’s first foldable phone) ಕೂಡ ಬಿಡುಗಡೆಯಾಗುವ ನಿರೀಕ್ಷೆ ಇದೆ. ಬೆಲೆ ಕುರಿತು ಅಧಿಕೃತ ಮಾಹಿತಿ ಲಭ್ಯವಿಲ್ಲದಿದ್ದರೂ, ಮಾರುಕಟ್ಟೆ ವಿಶ್ಲೇಷಕರು ಇದರ ಬೆಲೆ ₹90,000 ರಿಂದ ₹1.1 ಲಕ್ಷ ನಡುವೆಯಿರಬಹುದು ಎಂದು ಅಂದಾಜಿಸಿದ್ದಾರೆ.



























































