ನವದೆಹಲಿ: ದೇಶದಲ್ಲಿ 6G ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ 100 5G ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ದೂರಸಂಪರ್ಕ ಇಲಾಖೆ (DoT) ಬುಧವಾರ ತಿಳಿಸಿದೆ.
‘ಜಲ್ ಜೀವನ್ ಮಿಷನ್’ ಸೇರಿದಂತೆ ದೂರಸಂಪರ್ಕ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಪ್ರಯೋಗಾಲಯಗಳನ್ನು ವಿವಿಧ ರಾಜ್ಯಗಳಲ್ಲಿ ಸ್ಥಾಪಿಸಲಾಗಿದ್ದು, 2030ರೊಳಗೆ ಜಾಗತಿಕ 6G ಪೇಟೆಂಟ್‌ಗಳಲ್ಲಿ ಭಾರತದ ಪಾಲು ಶೇ.10ರಷ್ಟಾಗುವ ಗುರಿ ಸರ್ಕಾರದಾಗಿದೆ ಎಂದು ಇಲಾಖೆಯ ಅಧಿಕೃತ ಪ್ರಕಟಣೆ ತಿಳಿಸಿದೆ.
‘ಭಾರತ್ 6G ಅಲೈಯನ್ಸ್’ ವೇದಿಕೆ ಜಾಗತಿಕ 6G ಸಂಸ್ಥೆಗಳೊಂದಿಗೆ 10 ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕಿದ್ದು, ಮುಂದಿನ ಪೀಳಿಗೆಯ ಸಂವಹನ ತಂತ್ರಜ್ಞಾನಗಳಲ್ಲಿ ಭಾರತವನ್ನು ಮುಂಚೂಣಿಯಲ್ಲಿರಿಸಲು ಮುಂದಾಗಿದೆ.
ಇಲ್ಲಿ ನಡೆದ ‘ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ’ (ESTIC 2025) ಸಮಾವೇಶದ ವೇಳೆ ನಡೆದ ‘ಡಿಜಿಟಲ್ ಸಂವಹನ’ ಅಧಿವೇಶನದಲ್ಲಿ DoT ಅಧಿಕಾರಿಗಳು ಈ ಮಾಹಿತಿಯನ್ನು ಹಂಚಿಕೊಂಡರು.
ಟೆಲಿಕಾಂ ಕ್ರಾಂತಿ, ಆರ್ಥಿಕತೆಗೆ ಬಲ:
ದೂರಸಂಪರ್ಕ ಕ್ಷೇತ್ರವೇ ಎಲ್ಲಾ ಉತ್ಪಾದಕ ಚಟುವಟಿಕೆಗಳ ಬೆನ್ನೆಲುಬು ಎಂದು ಇಲಾಖೆಯ ಹಿರಿಯ ಅಧಿಕಾರಿ ಮಿತ್ತಲ್ ಹೇಳಿದರು. “ಭಾರತದ ಟೆಲಿಕಾಂ ಕ್ರಾಂತಿಯು ರಾಷ್ಟ್ರದ ಆರ್ಥಿಕ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ 5G ಸೇವೆಗಳನ್ನು ಅಳವಡಿಸಿಕೊಂಡ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ,” ಎಂದರು.
6G ನಾಯಕತ್ವದತ್ತ ಭಾರತ:
ದೇಶದಾದ್ಯಂತ ಸ್ಥಾಪಿಸಲಾದ 100 5G ಪ್ರಯೋಗಾಲಯಗಳು 6G ಸಂಶೋಧನೆಗೆ ನೆಲೆಬಲ ಒದಗಿಸುತ್ತವೆ ಎಂದು ಮಿತ್ತಲ್ ಅಭಿಪ್ರಾಯಪಟ್ಟರು. ಮುಂದಿನ ಪೀಳಿಗೆಯ ಸಂವಹನ ತಂತ್ರಜ್ಞಾನಕ್ಕಾಗಿ ಸರ್ಕಾರ ಸಂಶೋಧನೆ-ಅಭಿವೃದ್ಧಿಗೆ ಬೆಂಬಲ, ದೇಶೀಯ ಉತ್ಪಾದನೆಗೆ ಪ್ರೋತ್ಸಾಹ ಮತ್ತು ಶೈಕ್ಷಣಿಕ, ಕೈಗಾರಿಕಾ ಹಾಗೂ ಸರ್ಕಾರಿ ವಲಯಗಳ ಸಹಯೋಗದತ್ತ ಗಮನಹರಿಸಿದೆ ಎಂದು ಅವರು ಹೇಳಿದರು.
100 ಕ್ಕೂ ಹೆಚ್ಚು ಯೋಜನೆಗಳಿಗೆ ಬೆಂಬಲ:
ಪ್ರಸ್ತುತ 6G ಕ್ಷೇತ್ರದಲ್ಲಿ 100 ಕ್ಕೂ ಹೆಚ್ಚು ಸಂಶೋಧನಾ ಯೋಜನೆಗಳಿಗೆ ಸರ್ಕಾರದಿಂದ ಬೆಂಬಲ ದೊರೆಯುತ್ತಿದ್ದು, ಓಪನ್-RAN, ಸ್ಥಳೀಯ ಚಿಪ್‌ಸೆಟ್‌ಗಳು, ಕೃತಕ ಬುದ್ಧಿಮತ್ತೆ ಆಧಾರಿತ ನೆಟ್‌ವರ್ಕ್‌ಗಳು ಮತ್ತು ನಿಯಂತ್ರಕ ಸ್ಯಾಂಡ್‌ಬಾಕ್ಸ್‌ಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಖಾಸಗಿ ನೆಟ್‌ವರ್ಕ್‌ಗಳು, ಟೆಲಿಕಾಂ ಗುರಿಗಳು ಮತ್ತು ದೇಶೀಯ ತಂತ್ರಜ್ಞಾನ ಅಭಿವೃದ್ಧಿಯ ಕುರಿತು ಉದ್ಯಮ ನಾಯಕರಿಂದ ಚರ್ಚೆಗಳು ನಡೆದವು.
ಭಾರತದಲ್ಲಿ 5G ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವುದು, NavIC L1 ಸಿಗ್ನಲ್ ಮೂಲಕ ಸ್ಥಳೀಯ ಪಿಎನ್‌ಟಿ ವ್ಯವಸ್ಥೆ ಅಭಿವೃದ್ಧಿಪಡಿಸುವುದು ಮತ್ತು D2M ನಿಂದ 6G ತಂತ್ರಜ್ಞಾನಗಳವರೆಗೆ ಅಡ್ಡ ತಂತ್ರಜ್ಞಾನ ವ್ಯವಸ್ಥೆ ನಿರ್ಮಾಣದ ಕುರಿತೂ ಚಿಂತನೆ ನಡೆಸಲಾಯಿತು.
ನವೆಂಬರ್ 3 ರಿಂದ 5ರವರೆಗೆ ನಡೆದ ‘ESTIC 2025’ ಸಮಾವೇಶದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರು, ಪ್ರಮುಖ ವಿಜ್ಞಾನಿಗಳು, ನಾವೀನ್ಯಕಾರರು ಮತ್ತು ನೀತಿನಿರ್ಮಾಪಕರು ಸೇರಿದಂತೆ 3,000 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.


















































