ಮುಂಬೈ: ನಟಿ ಹಾಗೂ ಗಾಯಕಿ ಶೆಹ್ನಾಜ್ ಗಿಲ್ ಮದುವೆಯ ಬಗ್ಗೆ ತಮ್ಮ ಪ್ರಾಮಾಣಿಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಂದಿನ ಕಾಲದಲ್ಲಿ ಮದುವೆ ಜೀವನದ ಅವಿಭಾಜ್ಯ ಅಂಶವಲ್ಲ ಎಂದು ಅವರು ಹೇಳಿದ್ದು, ಪ್ರಸ್ತುತ ಮದುವೆಯಾಗುವ ಯಾವುದೇ ಯೋಜನೆಗಳಿಲ್ಲದಿದ್ದರೂ, ಭವಿಷ್ಯದಲ್ಲಿ ಆ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶೆಹ್ನಾಜ್ ನಿರ್ಮಾಪಕಿಯಾಗಿ ತಮ್ಮ ಚೊಚ್ಚಲ ಪ್ರಯತ್ನವಾಗಿರುವ “ಇಕ್ ಕುಡಿ” ಚಿತ್ರದ ಬಿಡುಗಡೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದರು. ಅಮರ್ಜಿತ್ ಸಿಂಗ್ ಸರೋನ್ ನಿರ್ದೇಶನದ ಈ ಚಿತ್ರವು ಅಕ್ಟೋಬರ್ 31ರಂದು ಬಿಡುಗಡೆಯಾಗಿದ್ದು, ಸರಿಯಾದ ಸಂಗಾತಿಯನ್ನು ಹುಡುಕುವ ಯುವತಿಯ ಭಾವನಾತ್ಮಕ ಹೋರಾಟವನ್ನು ಚಿತ್ರಿಸುತ್ತದೆ.
ಮದುವೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೆಹ್ನಾಜ್, “ಮದುವೆ ಕಡ್ಡಾಯವಲ್ಲ. ಅದು ನಿಮಗೆ ಬೇಕೆಂದರೆ ಸರಿ, ಆದರೆ ಇಲ್ಲದಿದ್ದರೂ ತಪ್ಪೇನಿಲ್ಲ. ನಾನು ಈಗ ಮದುವೆಯಾಗುವ ಯೋಚನೆ ಮಾಡುತ್ತಿಲ್ಲ, ಆದರೆ ಎಂದಿಗೂ ಮದುವೆಯಾಗುವುದಿಲ್ಲ ಎಂದೂ ಹೇಳುವುದಿಲ್ಲ. ನಾಳೆ ನನ್ನ ಮನಸ್ಸು ಬದಲಾಗಬಹುದು. ನನಗೆ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇನೆ,” ಎಂದರು.
“ಮದುವೆ ಎಂದರೆ ಹೆತ್ತವರ ಮನೆಯಿಂದ ಹೊರಬಂದು ನಿಮ್ಮ ಇಡೀ ಜೀವನವನ್ನು ಮತ್ತೊಬ್ಬ ವ್ಯಕ್ತಿಗೆ ನೀಡುವುದು. ಅದು ಸುಲಭ ನಿರ್ಧಾರವಲ್ಲ. ನೀವು ಯಾರ ಜೊತೆ ಜೀವನ ಹಂಚಿಕೊಳ್ಳುತ್ತೀರಿ ಎಂಬುದು ನಿಮಗೆ ಗೊತ್ತಿಲ್ಲ, ಆದ್ದರಿಂದ ಅದನ್ನು ಗಂಭೀರವಾಗಿ ಯೋಚಿಸಬೇಕು,” ಎಂದು ಶೆಹ್ನಾಜ್ ಹೇಳಿದರು.
‘ಬಿಗ್ ಬಾಸ್ 13’ ಮೂಲಕ ಮನೆಮಾತಾದ ಶೆಹ್ನಾಜ್, ತಾವು ಸಿದ್ಧಾರ್ಥ್ ಶುಕ್ಲಾ ಅವರೊಂದಿಗೆ ತೋರಿಸಿದ ಕೆಮಿಸ್ಟ್ರಿಯಿಂದ ಅಪಾರ ಜನಪ್ರಿಯತೆ ಗಳಿಸಿದ್ದರು. ಇತ್ತೀಚೆಗೆ ಅವರು ರಾಜ್‌ಕುಮಾರ್ ರಾವ್ ಮತ್ತು ತ್ರಿಪ್ತಿ ದಿಮ್ರಿ ಅಭಿನಯದ “ವಿಕಿ ವಿದ್ಯಾ ಕಾ ವೋ ವಾಲಾ ವಿಡಿಯೋ” ಚಿತ್ರದಲ್ಲಿನ “ಸಜ್ನಾ ವೆ ಸಜ್ನಾ” ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
2015ರಲ್ಲಿ ‘ಶಿವ್ ದಿ ಕಿತಾಬ್’ ಮ್ಯೂಸಿಕ್ ವಿಡಿಯೋ ಮೂಲಕ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಶೆಹ್ನಾಜ್, 2017ರಲ್ಲಿ ಪಂಜಾಬಿ ಚಿತ್ರ ‘ಸತ್ ಶ್ರೀ ಅಕಾಲ್ ಇಂಗ್ಲೆಂಡ್’ ಮೂಲಕ ನಟಿಯಾಗಿ ಎಂಟ್ರಿ ಮಾಡಿದರು. ನಂತರ ‘ಕಲಾ ಶಾ ಕಾಲಾ’, ‘ಡಾಕಾ’, ‘ಹೊನ್ಸ್ಲಾ ರಖ್’, ‘ಕಿಸಿ ಕಾ ಭಾಯಿ ಕಿಸಿ ಕಿ ಜಾನ್’ ಹಾಗೂ ‘ಥ್ಯಾಂಕ್ಸ್ ಫಾರ್ ಕಮಿಂಗ್’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಅವರು ಹಲವು ಜನಪ್ರಿಯ ಮ್ಯೂಸಿಕ್ ವೀಡಿಯೊಗಳಲ್ಲೂ ಕಾಣಿಸಿಕೊಂಡಿದ್ದಾರೆ — ‘ಮಾರ್ ಕರ್ ಗಯಿ’, ‘ಪಿಂಡಾನ್ ದಿಯಾನ್ ಕುಡಿಯನ್’, ‘ಜೆ ಹಾನ್ ನಿ ಕರ್ಣಿ’, ‘ವಿಯಾ ದ ಚಾ’, ‘ಶೋನಾ ಶೋನಾ’, ‘ಹ್ಯಾಬಿಟ್’ ಮತ್ತಿತರವುಗಳ ಮೂಲಕ ಅಭಿಮಾನಿಗಳನ್ನು ಮೆಚ್ಚಿಸಿದ್ದಾರೆ. ಶೀಘ್ರದಲ್ಲೇ ಅವರು ನಟಿಸಿರುವ ‘ಸಬ್ ಫಸ್ಟ್ ಕ್ಲಾಸ್’ ಚಿತ್ರ ಬಿಡುಗಡೆಯಾಗಲಿದೆ.


















































