ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಹೊರವಲಯದಲ್ಲಿ ಭಾನುವಾರ ದುರ್ಘಟನೆ ಸಂಭವಿಸಿದೆ. ರಿಷಬ್ ಶೆಟ್ಟಿ ಅಭಿನಯದ ಕಾಂತಾರ: ಚಾಪ್ಟರ್ 1 ಸಿನಿಮಾ ನೋಡಲು ಬಂದಿದ್ದ ಇಬ್ಬರು ಯುವಕರು ನಾಲೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತರನ್ನು ಮುದಗಲ್ ಮೂಲದ ವೆಂಕಟೇಶ (28) ಮತ್ತು ಯಲ್ಲಾಲಿಂಗ (28) ಎಂದು ಗುರುತಿಸಲಾಗಿದೆ. ಇಬ್ಬರೂ ಸಿನಿಮಾವನ್ನು ನೋಡಲು ಮಸ್ಕಿಗೆ ಬಂದಿದ್ದರು. ಮಧ್ಯಾಹ್ನದ ಶೋಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸಮಯ ಕಳೆಯಲು ನಾಲೆಯಲ್ಲಿ ಈಜಾಡಲು ನಿರ್ಧರಿಸಿದ್ದರು.
ಈ ವೇಳೆ ಈಜು ಬಾರದ ಯಲ್ಲಾಲಿಂಗ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದಾಗ, ಅವನನ್ನು ಉಳಿಸಲು ಪ್ರಯತ್ನಿಸಿದ ವೆಂಕಟೇಶನೂ ನೀರುಪಾಲಾಗಿದ್ದಾನೆ. ಇಬ್ಬರ ಮೃತದೇಹಗಳು ಬಳಿಕ ಸಿರವಾರ ಬಳಿಯ ನಾಲೆಯಿಂದ ಪತ್ತೆಯಾಗಿವೆ.
ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.