ಬೆಂಗಳೂರು, ಕಾಂಗ್ರೆಸ್ ಬಂದ ನಂತರ ಬೃಹತ್ ಬೆಂಗಳೂರು ಮಹಾಪಾಲಿಕೆಯನ್ನು ಐದು ಹೋಳು ಮಾಡಲಾಗಿದೆ. 198 ವಾರ್ಡ್‌ಗೆ 90% ನಷ್ಟು ಇಂಜಿನಿಯರ್ ಇಲ್ಲ. ಪಾಲಿಕೆಯೇ ಪಾಪರ್ ಆಗಿರುವ ಸಮಯದಲ್ಲಿ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ? ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ ಅವರು, ಒಂದು ಸಾವಿರಕ್ಕೂ ಅಧಿಕ ನೇಮಕಾತಿ ಮಾಡಿದರೆ ಹಣ ಎಲ್ಲಿಂದ ತರುತ್ತಾರೆ? ಬಹಳ ಕಡೆ ಶಂಕುಸ್ಥಾಪನೆಯಾಗಿ, ಕಾಮಗಾರಿ ಸ್ಥಗಿತವಾಗಿದೆ. ಇಂತಹ ಸ್ಥಿತಿಯಲ್ಲಿ ಆಡಳಿತ ನಡೆಯುವುದಿಲ್ಲ ಎಂದರು.
ಬೆಂಗಳೂರಿನಲ್ಲಿ 5,000 ಕೋಟಿ ರೂ. ಬಿಡುಗಡೆಯಾಗಿದ್ದರೂ ರಸ್ತೆ ದುರಸ್ತಿ ಮಾಡಿಲ್ಲ. ಶುದ್ಧ ಕುಡಿಯುವ ನೀರಿನ ಘಟಕದ 20 ಲೀಟರ್ ನೀರಿನ ದರವನ್ನು 5 ರಿಂದ 10 ರೂ. ಗೆ ಏರಿಸಲಾಗಿದೆ. ತೈಲ ದರ, ಹಾಲಿನ ದರ ಏರಿಕೆ, ಹೊಸದಾಗಿ ಕಸ ಶುಲ್ಕ ಹೇರಲಾಗಿದೆ. ಇನ್ನು ಗಾಳಿಗೂ ಶುಲ್ಕ ತಂದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು ಸಾಕಾರವಾಗಲಿದೆ. 65-70,000 ಕೋಟಿ ರೂ.ನಷ್ಟು ಹೆಚ್ಚುವರಿ ತೆರಿಗೆಯನ್ನು ಹೇರಲಾಗಿದೆ ಎಂದರು.
ವಯನಾಡಿನಲ್ಲಾದ ಆನೆಯಿಂದ ಸತ್ತವರಿಗೆ 15 ಲಕ್ಷ ರೂ. ಪರಿಹಾರ ನೀಡಲಾಗಿದೆ. ಹಾಸನದಲ್ಲಿ ನಡೆದ ಘಟನೆಯಲ್ಲಿ ಸಂತ್ರಸ್ತರಿಗೆ ಮಾನವೀಯತೆ ಆಧಾರದಲ್ಲಿ ಹೆಚ್ಚು ಪರಿಹಾರ ನೀಡಬೇಕಿತ್ತು. ಸಿಎಂ ಸಿದ್ದರಾಮಯ್ಯನವರಿಗೆ ನಮ್ಮ ರಾಜ್ಯದ ಜನರ ಮೇಲೆ ಮಾನವೀಯತೆ ಇಲ್ಲ ಎಂದರು.
ಆನೇಕಲ್‌ನಲ್ಲಿ ಫಲವತ್ತಾದ ಸಾವಿರಾರು ಎಕರೆ ಜಮೀನು ಸ್ವಾಧೀನ ಮಾಡಲಾಗಿದೆ. ಬಿಡದಿ ನೀರಾವರಿ ಪ್ರದೇಶವಾಗಿದ್ದು, ಇಲ್ಲಿನ ಸ್ವಾಧೀನವನ್ನು ಹಿಂದಿನ ಸರ್ಕಾರ ರದ್ದು ಮಾಡಿದೆ. ಆದರೆ ಈಗ ಮತ್ತೆ ಸ್ವಾಧೀನ ಮಾಡಲಾಗುತ್ತಿದೆ. ಕೆಂಗೇರಿ, ಯಲಹಂಕ ಸೇರಿದಂತೆ ರೈತರ 50,000 ಎಕರೆ ಜಮೀನನ್ನು ಸ್ವಾಧೀನ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದರು.
ಧರ್ಮಸ್ಥಳದ ವಿಚಾರದಲ್ಲಿ ಎಸ್‌ಐಟಿ ವೇಗವಾಗಿ ಗುಂಡಿ ಅಗೆದಿದೆ. ಆದರೆ ತನಿಖೆ ನಿಧಾನವಾಗಿದೆ. ತನಿಖೆಗೆ ಒಳಪಟ್ಟವರು ಹೊರಗೆ ಬಂದು ಮಾಧ್ಯಮಗಳ ಜೊತೆ ಮಾತಾಡಿದ್ದಾರೆ. ಈ ವಿಚಾರದಲ್ಲಿ ನಾವು ಹೋರಾಟ ಮಾಡುತ್ತೇವೆ. ಇದು ಸರಿಯಾಗಿ ತನಿಖೆಯಾಗಬೇಕು. ಇದಕ್ಕಾಗಿ ಕೋರ್ಟ್ ಮೊರೆ ಕೂಡ ಹೋಗುತ್ತೇವೆ. ಧರ್ಮಸ್ಥಳವನ್ನು ಹಾಳು ಮಾಡಲು ಕಮ್ಯುನಿಸ್ಟ್‌ಗಳು ಪ್ರಯತ್ನ ಮಾಡಿದ್ದಾರೆ ಎಂದರು.
ವಕ್ಫ್ ತಿದ್ದುಪಡಿ ಮಸೂದೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದು ಸ್ವಾಗತಾರ್ಹ. ಇದರಿಂದಾಗಿ ಲಕ್ಷಾಂತರ ರೈತರ, ದೇವಾಲಯಗಳ ಜಮೀನು ಉಳಿದಿದೆ ಎಂದರು.




























































