ಬೆಂಗಳೂರು: ಸಿಎಂ ಸಿದ್ದರಾಮಯ್ಯ ಎಂದರೆ ಮತಾಂತರದ ರಾಯಭಾರಿ. ಯಾರೂ ಯೋಚನೆ ಮಾಡದಂತಹ ಜಾತಿಗಳನ್ನು ಅವರು ಸೃಷ್ಟಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನದಲ್ಲಿ ಇಲ್ಲದ ಜಾತಿಗಳನ್ನು ಸಿಎಂ ಸಿದ್ದರಾಮಯ್ಯ ಹುಟ್ಟುಹಾಕಿದ್ದಾರೆ. ಇಂತಹ ಜಾತಿ ಸಮೀಕ್ಷೆ ರದ್ದಾಗಲಿದೆ. ಈ ಸಮೀಕ್ಷೆ ಮೂಲಕ ಮತಾಂತರಕ್ಕೆ ಪ್ರೇರಣೆ ನೀಡಿ, ಹಿಂದೂಗಳನ್ನು ತುಳಿಯಲಾಗುತ್ತಿದೆ. ಏನೇ ಮಾಡಿದರೂ ಸಂವಿಧಾನದ ಪ್ರಕಾರ ಮಾಡಲಿ. ಮೀಸಲಾತಿಗೆ ಸಂಬಂಧಿಸಿದಂತೆ ಕೋರ್ಟ್ ಆದೇಶವಿದೆ. ಅದರ ಪ್ರಕಾರ ಕ್ರಮ ವಹಿಸಲಿ ಎಂದರು.
ಸಿಎಂ ಸಿದ್ದರಾಮಯ್ಯ ಎಲ್ಲದರಲ್ಲೂ ಮುಸ್ಲಿಂ ಓಲೈಕೆ ಮಾಡುತ್ತಾರೆ. ಹಿಂದೂಗಳ ಮತ ಮಾತ್ರ ಬೇಕು. ಮತ ಸಿಕ್ಕ ನಂತರ ಹಿಂದೂ ಧರ್ಮದಲ್ಲಿ ಲೋಪವಿದೆ ಎಂದಿದ್ದಾರೆ. ಮುಸ್ಲಿಮರಲ್ಲಿ ಮಹಿಳೆಯರು ಮಸೀದಿಗೆ ಹೋಗುವಂತಿಲ್ಲ. ಇದು ಕೂಡ ತಪ್ಪೆಂದು ಅವರಿಗೆ ಅನ್ನಿಸಲಿಲ್ಲ. ಅಂದರೆ ಹಿಂದೂ ಧರ್ಮದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ. ಕೇವಲ ಹಿಂದೂ ಧರ್ಮವನ್ನು ಟಾರ್ಗೆಟ್ ಮಾಡುವ ಬದಲು ಬೇರೆ ಧರ್ಮಗಳ ಬಗ್ಗೆ ಕೂಡ ಮಾತಾಡಲಿ ಎಂದರು.
ದಸರಾ ಹಬ್ಬವನ್ನು ನಾಡಹಬ್ಬ, ಹಿಂದೂಗಳ ಹಬ್ಬ ಎನ್ನುತ್ತಾರೆ. ಅದೇ ರೀತಿ ಮುಸ್ಲಿಂ ಹಬ್ಬಗಳನ್ನು ಕೂಡ ನಾಡಹಬ್ಬ ಎನ್ನಲಿ ಮತ್ತು ಮುಸ್ಲಿಂ ಹಬ್ಬಗಳನ್ನು ಹಿಂದೂಗಳ ಕೈಯಲ್ಲಿ ಉದ್ಘಾಟನೆ ಮಾಡಿಸಲಿ. ದಸರಾ ಉದ್ಘಾಟನೆಯನ್ನು ಹಿಂದೂಗಳ ಕೈಯಲ್ಲಿ ಮಾಡಿಸಬೇಕಿತ್ತು. ಈ ಹಬ್ಬವನ್ನು ಮೈಸೂರು ಅರಸರು ಮಾಡಿಕೊಂಡು ಬಂದಿದ್ದಾರೆ. ಇದು ಪರಂಪರೆಯೇ ಹೊರತು ಕಾನೂನಲ್ಲ. ಆದ್ದರಿಂದ ಇದಕ್ಕಾಗಿ ಪ್ರತ್ಯೇಕ ಕಾನೂನು ತರುವ ಅಗತ್ಯವಿದೆ. ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗಬಾರದು ಎಂಬಂತೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ಹಿಂದೂ-ಮುಸ್ಲಿಂ ನಡುವೆ ಒಡಕು ಮೂಡಿದೆ ಎಂದರು.




























































