ಚಾಮರಾಜನಗರ: ಹನೂರು ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ನೇತೃತ್ವದಲ್ಲಿ ಶ್ರೀ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಅದ್ದೂರಿ ಮತ್ತು ಸಡಗರದಿಂದ ನೆರವೇರಿತು.
ದ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದ ತಹಶೀಲ್ದಾರ್ ಚೈತ್ರ, ದೇಶದ ಸ್ವಾತಂತ್ರ್ಯಕ್ಕಾಗಿ ಹಲವು ಮಹನೀಯರ ಕೊಡುಗೆ ಇದೆ. ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ವೀರ ಯೋಧರು ಮತ್ತು ಹೋರಾಟಗಾರರನ್ನು ಸ್ಮರಣೆ ಮಾಡುವ ಸುದಿನ. ಅವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವ ಮೂಲಕ ದೇಶ ಪ್ರೇಮವನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕು. ಹನೂರು ಶೈಕ್ಷಣಿಕವಾಗಿ ಜಿಲ್ಲೆಯಲ್ಲೇ ಉನ್ನತ ಮಟ್ಟದ ಸಾಧನೆ ಮಾಡುತ್ತಿದೆ. ಈ ಮಹಾನ್ ಕಾರ್ಯದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದರು.
ಶಾಸಕರಾದ ಎಂಆರ್ ಮಂಜುನಾಥ್, ಮಾತನಾಡಿ ಸ್ವಾತಂತ್ರಗಳಿಸಲು ಅನೇಕ ಮಹನೀಯರು ತಮ್ಮ ಪ್ರಾಣ ಮತ್ತು ಬಲಿದಾನವನ್ನು ಮಾಡಿದ್ದಾರೆ. ಸ್ವಾತಂತ್ರದ ನಂತರ ಡಾ. ಬಿ. ಆರ್. ಅಂಬೇಡ್ಕರ್ ಅವರ ನಾಯಕತ್ವದಲ್ಲೇ ರಚನೆಯಾದ ಸಂವಿಧಾನದ ಮೂಲಕ ಸದೃಢ ಭಾರತವಾಗಿ ನಿರ್ಮಾಣವಾಗಿದೆಎಂದರು. ದೇಶಕ್ಕೆ ಸ್ವತಂತ್ರ ತಂದು ಕೊಡಲು ಹೋರಾಟ ಮಾಡಿದ ಎಲ್ಲಾ ಪೂರ್ವಿಕರ ಶ್ರಮ ಅತ್ಯಂತ ಶ್ಲಾಘನೀಯವಾದದ್ದು. ಹಿರಿಯರ ಸಾಧನೆಯೇ ನಮಗೆ ಮಾರ್ಗದರ್ಶನ ಜಾತಿ ಮತ ಭೇದ ಬಾವವನ್ನು ಮರೆತು ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡಿಸಲು ಸಮ ಸಮಾಜ ನಾಡು ಕಟ್ಟಲು ನಾವೆಲ್ಲ ಕೆಲಸ ಮಾಡೋಣ ಎಂದರು.
ಲ್ಯಾಪ್ ಟಾಪ್ ವಿತರಣೆ :
ಹನೂರು ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಅಂಜಲಿ ವಿ ಎಲ್ಲೆಮಾಳ ಸರ್ಕಾರಿ ಶಾಲೆ . ಚೆನ್ನಾಲಿಂಗನಹಳ್ಳಿ ಪ್ರಿಯ ದರ್ಶಿನಿ. ಸುಸೈನ ಮಾರಹಳ್ಳಿ ಮೂರು ಮಕ್ಕಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಿದರು. 13 ವಿಶೇಷ ಚೇತನ ವಿದ್ಯಾರ್ಥಿಗಳಿಗೆ ವೀಲ್ ಚೇರ್ ವಿತರಣೆ ಮಾಡಲಾಯಿತು ಜೊತೆಗೆ ಸ್ವಚ್ಛತಾ ಕಾರ್ಮಿಕ ಮಹಿಳೆ ರಾಮಿ ಅವರಿಗೆ ಸನ್ಮಾನ ಮಾಡಲಾಯಿತು. ಅಗ್ನಿ ಶಾಮಕ ಸಿಬ್ಬಂದಿಯ ಅತುತ್ಯಮ ಸೇವೆಯನ್ನು ಗುರುತಿಸಿ ಪೆರಿಯಾ ನಾಯಗಮ್ ರವರನ್ನು ಸನ್ಮಾನ ಮಾಡಿದರು.
ಇದೇ ವೇಳೆ, ವಿವಿಧ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಚೆಸ್ಕಾಂ ಸಿಬ್ಬಂದಿಯ ಅತ್ಯಾಕರ್ಷಕ ಪಥಸಂಚಲನವು ಸ್ವಾತಂತ್ರ್ಯೋತ್ಸವದ ಆಕರ್ಷಣೆಯನ್ನು ಹೆಚ್ಚಿಸಿತು.
ಸಾಂಸ್ಕೃತಿಕ ಕಾರ್ಯಕ್ರಮಗಳ ಝಲಕ್ :
ಪಟ್ಟಣದ ವಿವಿಧ ಶಾಲೆಯ ಮಕ್ಕಳು ದೇಶಭಕ್ತಿ ಸಾರುವ ಗೀತೆಗಳಿಗೆ ಆಕರ್ಷಕ ನೃತ್ಯವನ್ನು ಸಾದರಪಡಿಸಿದರು. ಗೌತಮ ಶಾಲೆ, ಮಂಗಲ ಏಕಲವ್ಯ ಶಾಲೆ, ಪಟ್ಟಣದ ಕ್ರಿಸ್ತರಾಜ ಶಾಲೆ, ವಿವೇಕಾನಂದ ಶಾಲೆ, ಜಿ. ವಿ.ಗೌಡ ಶಾಲೆ, ಬಿ. ಎಂ. ಜಿ.ಶಾಲೆ, ಹೋಲಿ ಏಂಜಲ್ ಶಾಲೆ ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ದೇಶಭಕ್ತಿಯನ್ನು ಸಾರುವ ಗೀತೆಗೆ ಮನಮೋಹಕವಾಗಿ ನೃತ್ಯಗಳನ್ನು ಸಾದರಪಡಿಸುವುದ್ದು ನೋಡುಗರ ಕಣ್ಮನ ಸೆಳೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ಇಒ ಉಮೇಶ್, ತಾಲೂಕು ವೈದ್ಯಧಿಕಾರಿ ಪ್ರಕಾಶ್, ಹನೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆನಂದ್ ಮೂರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಳ್ಯ ರಾಚಪ್ಪ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಮುಮ್ತಾಜ್ ಬಾನು, ಉಪಾಧ್ಯಕ್ಷ ಆನಂದ್ ಕುಮಾರ್, ಪಟ್ಟಣ ಪಂಚಾಯತಿ ಸದಸ್ಯರಾದ ಪವಿತ್ರ ಪ್ರಸನ್ನ, ಮಹೇಶ್, ಸಂಪತ್ ಕುಮಾರ್, ಮಂಜುಳ, ರೂಪ, ಸೋಮಶೇಖರ್, ಲತಮಣಿ, ಪಟ್ಟಣ ಪಂಚಾಯತಿ ನಾಮನಿರ್ದೇಶನ ಸದಸ್ಯರಾದ ಮಹಾದೇಶ್, ಚೆಸ್ಕಾಂ ಅಧಿಕಾರಿ ರಂಗಸ್ವಾಮಿ ಸಹಿತ ಅನೇಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.