ಬೆಂಗಳೂರು : ಮೂರ್ನಾಲ್ಕು ದಿನಗಳಲ್ಲಿ ನಿಗಮ ಮಂಡಳಿ ಪಟ್ಟಿ ಬಿಡುಗಡೆಯಾಗುವ ಸಾಧ್ಯೆಗಳಿವೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುಳಿವು n
“ಸರ್ಕಾರ ಬಂದ ನಂತರ ನಾವು ಕಾರ್ಯಕರ್ತರಿಗೆ ಅನೇಕ ಜವಾಬ್ದಾರಿ ನೀಡಿದ್ದೇವೆ. ಗ್ಯಾರಂಟಿ ಸಮಿತಿ, ನಾಮನಿರ್ದೇಶನ ಮಾಡಿದ್ದೇವೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮತ್ತಷ್ಟು ಜನರಿಗೆ ಜವಾಬ್ದಾರಿ ನೀಡಿ ಪಟ್ಟಿ ಹೊರಬರಲಿದೆ. ಈಗಾಗಲೇ ಅದು ಸಿದ್ಧವಾಗುತ್ತಿದೆ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಇಬ್ಬರಂತೆ ಸುಮಾರು 700 ಜನರಿಗೆ ಸ್ಥಾನಮಾನ ನೀಡಲು ಮುಂದಾಗಿದ್ದೇವೆ. ಉಳಿದ 30 ಜನರಿಗೆ ಕೆಲವು ನಿಗಮ ಮಂಡಳಿ, ಮತ್ತೆ ಕೆಲವರಿಗೆ ಉಪಾಧ್ಯಕ್ಷ ಹುದ್ದೆ ನೀಡಲಾಗುತ್ತಿದೆ. ಪಟ್ಟಿ ಹೈಕಮಾಂಡ್ ಬಳಿಗೆ ಹೋಗಿದ್ದು, ಅವರು ಅಂತಿಮ ತೀರ್ಮಾನ ಮಾಡಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಯಾರೆಲ್ಲಾ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಪರಿಶೀಲಿಸಿದ್ದಾರೆ. ನಮ್ಮ ಪಕ್ಷದಲ್ಲಿ ಸುಮಾರು 4-5 ಸಾವಿರ ಜನ ಈ ಸ್ಥಾನಮಾನಕ್ಕೆ ಅರ್ಹತೆ ಹೊಂದಿರುವವರು ಇದ್ದಾರೆ” ಎಂದು ತಿಳಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಪರಾಜಿತ ಅಭ್ಯರ್ಥಿ ಹಾಗೂ ಶಾಸಕರ ಜತೆ ನೇರವಾಗಿ ಮಾತನಾಡಿ ಹೆಸರು ಪಡೆದಿದ್ದಾರೆ. ನಾವು ನಮ್ಮ ಸಲಹೆ ನೀಡಿದ್ದೇವೆ. ಈಗ ಕೆಲವರಿಗೆ ಸಿಗದೇ ಇರಬಹುದು. ಮುಂದೆ ನಾವು ಎರಡನೇ ಬಾರಿಗೆ ಮಾಡಿದಾಗ ಅವಕಾಶ ನೀಡುತ್ತೇವೆ. ಎಲ್ಲಾ ಸಮುದಾಯದವರಿಗೆ ಸಮಾನ ಅವಕಾಶ ನೀಡಲು ಚರ್ಚೆ ನಡೆಯುತ್ತಿದೆ. ಹೀಗಾಗಿ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.




























































