ಕ್ಯುಪರ್ಟಿನೊ (ಅಮೆರಿಕ): ವಿಶ್ವದ ಅಗ್ರಗಣ್ಯ ತಂತ್ರಜ್ಞಾನ ಸಂಸ್ಥೆ ‘ಆಪಲ್’ ತನ್ನ ಹೊಸ ಕಾರ್ಯಾಚರಣೆ ಮುಖ್ಯಸ್ಥರನ್ನಾಗಿ (Chief Operating Officer – COO) ಭಾರತ ಮೂಲದ ಸಬಿಹ್ ಖಾನ್ ಅವರನ್ನು ನೇಮಕ ಮಾಡಿದೆ.
ಉತ್ತರ ಪ್ರದೇಶದ ಮೊರಾದಾಬಾದ್ ಮೂಲದ ಖಾನ್, ಕಳೆದ ಮೂರು ದಶಕಗಳಿಂದ ಆಪಲ್‌ನಲ್ಲಿ ವಿವಿಧ ಹೊಣೆಗಾರಿಕೆಗಳನ್ನು ನಿಭಾಯಿಸುತ್ತಿದ್ದರು. 1995ರಲ್ಲಿ ಸಂಸ್ಥೆಯಲ್ಲಿ ಪ್ರಾರಂಭಿಸಿದ ತಮ್ಮ ಕರಿಯರ್‌ನ್ನು ನಿರಂತರ ಶ್ರಮದಿಂದ ಬೆಳೆಸಿಕೊಂಡು, ಇಂದು ಸಂಸ್ಥೆಯ ಎರಡನೇ ಪ್ರಮುಖ ಸ್ಥಾನಕ್ಕೆ ಏರಿರುವ ಮೂಲಕ ಭಾರತಕ್ಕೆ ಹೆಮ್ಮೆ ತರಿಸಿದ್ದಾರೆ.
1966ರಲ್ಲಿ ಜನನ ಕಂಡ ಸಬಿಹ್ ಖಾನ್ ಅವರು 10ನೇ ವಯಸ್ಸಿನಲ್ಲಿ ಸಿಂಗಾಪುರಕ್ಕೆ ತೆರಳಿದ್ದರು. ಅಲ್ಲಿ ಅವರು ಅರ್ಥಶಾಸ್ತ್ರ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ನಂತರ, ಅಮೆರಿಕದ ಪ್ರಸಿದ್ಧ ರೆನ್ಸೆಲೇರ್ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಕಂಪನಿಯ ಉತ್ಪಾದನಾ ಸರಪಳಿಯ ಅಭಿವೃದ್ಧಿ, ಸರಬರಾಜು ವ್ಯವಹಾರ ಮತ್ತು ವಿಶ್ವದಾದ್ಯಂತದ ಕಾರ್ಯಾಚರಣೆಯ ನಿಭಾವಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಖಾನ್ ಅವರಿಗೆ, ಕಂಪನಿಯ ಮುಂದಿನ ಬೆಳವಣಿಗೆಯಲ್ಲಿ ಪ್ರಮುಖ ಭೂಮಿಕೆ ನಿರೀಕ್ಷಿಸಲಾಗಿದೆ.