ಬೆಂಗಳೂರು: ಐಪಿಎಲ್ ದಿಗ್ವಿಜಯ ಸಮಾರಂಭದ ವೇಳೆ ಬೆಂಗಳೂರಿನ ಎಂ,ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ.
RCB ವಿಜಯೋತ್ಸವ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿರುವ ರಾಜ್ಯ ಸರ್ಕಾರ ಇದೀಗ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕವೂ ಮತ್ತೊಂದು ವಿವಾದ ಸೃಷ್ಟಿಸಿದೆ. ತನ್ನ ವೈಫಲ್ಯವನ್ನು ಮರೆ ಮಾಚಲು ಸರ್ಕಾರ ದಕ್ಷ ಅಧಿಕಾರಿಗಳ ತಲೆದಂಡ ಮಾಡಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣ ಬಳಿಯ ಕಾಲ್ತುಳಿತ ದುರ್ಘಟನೆ ಕುರಿತಂತೆ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸರ್ಕಾರಕ್ಕೆ ನೋಟಿಸ್ ಜಾರಿಮಾಡಿದೆ. ಇದರಿಂದ ತೀವ್ರ ಮುಜುಗರಕ್ಕೆ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಸಂಪುಟ ಸಹೋದ್ಯೋಗಿಗಳ ಜೊತೆ ಚರ್ಚಿಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ಧರಾಮಯ್ಯ, ಕಾಲ್ತುಳಿತ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುತ್ತಿರುವುದಾಗಿ ಘೋಷಣೆ ಮಾಡಿದರು. ಜೊತೆಗೆ ನ್ಯಾಯಾಂಗ ತನಿಖೆ ನಡೆಸುವ ನಿರ್ಧಾರ ಪ್ರಕಟಿಸಿದರು. ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ , ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಹೆಚ್.ಟಿ.ಶೇಖರ್, ಹಾಗೂ ಕಬ್ಬನ್ ಪಾರ್ಕ್ ಎಸಿಪಿ, ಇನ್ಸ್ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ.l ಎಂದು ತಿಳಿಸಿದರು.
ಸಾರ್ವಜನಿಕರ ಆಕ್ಷೇಪ:
ಕಾಲ್ತುಳಿತ ದುರಂತದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಆದರೆ ಸರ್ಕಾರದ ವೈಫಲ್ಯವನ್ನು ಮರೆಮಾಚಲು ಸಿಎಂ ಸಿದ್ಧರಾಮಯ್ಯ ಅವರು ಪೊಲೀಸ್ ಆಯುಕ್ತರನ್ನು ಅಮಾನತು ಮಾಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ RCB ವಿಜಯೋತ್ಸವ ನಡೆಸುವುದಕ್ಕೆ ಪೊಲೀಸ್ ಅಧಿಕಾರಿಗಳೇ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಸರ್ಕಾರದಲ್ಲಿರುವ ಪ್ರಮುಖರ ಒತ್ತಡದಿಂದಾಗಿ ವಿಜಯೋತ್ಸವ ನಡೆದಿದೆ ಎಂದು ದೂರಿರುವ ಸಾರ್ವಜನಿಕರು, ಇಂತಹ ಘಟನೆಗೆ ಪೊಲೀಸ್ ಕಮೀಷನರ್ ಹಾಗೂ ಹೆಚ್ಚುವರಿ ಆಯುಕ್ತರ ಅಮಾನತು ಸರಿಯಾದ ಆಡಳಿತಾತ್ಮಕ ನಿರ್ಧಾರವಲ್ಲ ಎಂದು ಸಂಸದೀಯ ಪಟುಗಳು ಆಕ್ಷೇಪಿಸಿದ್ದಾರೆ.
ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ:
ಪೊಲೀಸ್ ಅಧಿಕಾರಿಗಳ ಅಮಾನತು ನಿರ್ಧಾರ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್, ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆಯಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.
‘ದಕ್ಷ ಅಧಿಕಾರಿಗಳಿಗೆ ಅಮಾನತ್ತು ಬಳುವಳಿ. ಇದು ಗ್ಯಾರಂಟಿ’ ಎಂದು ಟೀಕಿಸಿರುವ ಸುರೇಶ್ ಕುಮಾರ್, ‘ಅಂಧೇರ್ ನಗರ್ ಕಾ ಚೌಪಟ್ ರಾಜಾ ನೆನಪಿಗೆ ಬರುತ್ತಿದ್ದಾನೆ’ ಎಂದು ಟೀಕಿಸಿದ್ದಾರೆ.
ಪೋಲಿಸ್ ಅಧಿಕಾರಿಗಳ ಸಲಹೆ ತಿರಸ್ಕರಿಸಿ ಹುಚ್ಚು ಪ್ರಚಾರ ಗಿಟ್ಟಿಸಲು ಹೋಗಿ ಅಮಾಯಕರನ್ನು ಬಲಿ ಕೊಟ್ಟ ಆಡಳಿತ ಇದೀಗ ತಾನು ನುಣಿಚಿಕೊಳ್ಳಲು ದಕ್ಷ ಅಧಿಕಾರಿಗಳನ್ನು ಬಲಿ ಕೊಡಹೊರಟಿರುವುದು ದಿವಾಳಿತನದ ಸ್ಪಷ್ಟ ಉದಾಹರಣೆ ಎಂದು ತೀಕ್ಷ್ಣ ಪದಗಳಲ್ಲಿ ಟೀಕಿಸಿದ್ದಾರೆ. ಸರ್ಕಾರದ ಈ ಕೃತ್ಯ ಅಧಿಕಾರಿಗಳ ನೈತಿಕತೆ ಕುಸಿಯುವಂತೆ ಮಾಡುವುದು ಖಚಿತ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.




























































