ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ರೈಲು ಅಪಹರಣ ಮಾಡಿರುವ ಉಗ್ರರ ವಿರುದ್ದ ಸೆಣಸಾಡಿರುವ ಸೇನಾ ಪಡೆಗಳು ಎಲ್ಲಾ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ವೆಟ್ಟಾದಿಂದ ಪೆಶಾವರಕ್ಕೆ ತೆರಳುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲಿನ್ನು ವಶಕ್ಕೆ ಪಡೆದು ಅಪಹರಿಸಿದ್ದ ಉಗ್ರರು, 400 ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೆಯಾಳಾಗಿರಿಸಿದ್ದರು. ಗಡಾಲರ್ ಮತ್ತು ಪೆಹ್ರೊ ಕುನ್ರಿ ಕಣಿವೆ ಪ್ರದೇಶದ ಸಮೀಪದ ಸುರಂಗದಲ್ಲಿ ಬಂದೂಕುಧಾರಿಗಳು ಮಂಗಳವಾರ ಈ ರೈಲನ್ನು ಹಿಡಿತಕ್ಕೆ ತೆಗೆದುಕೊಂಡಿದ್ದರು. ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
ಈ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಪಾಕಿಸ್ತಾನದ ಭದ್ರತಾ ಪಡೆ ರೈಲನ್ನು ಹೈಜಾಕ್ ಮಾಡಿದ್ದ ಬಲೂಚಿಸ್ತಾನ ಬಂಡುಕೋರರ ಪೈಕಿ ಸುಮಾರು 30 ಉಗ್ರರನ್ನು ಹತ್ಯೆ ಮಾಡಿದೆ. 30 ಗಂಟೆಗಳ ಸತತ ರಕ್ಷಣಾ ಕಾರ್ಯಾಚರಣೆಯಲ್ಲಿ, 340 ಕ್ಕೂ ಹೆಚ್ಚು ರೈಲು ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ, ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸೇನೆಯ 27 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ ಎನ್ನಲಾಗಿದೆ.