ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಿ ಹುಮ್ನಾಬಾದ್ ತರಬೇತಿ ಕೇಂದ್ರದಲ್ಲಿ ಚಾಲನಾ ವೃತ್ತಿ ಪರೀಕ್ಷೆ ಪಡೆಯಲು ಮತ್ತೊಂದು ಅವಕಾಶ ಕಲ್ಪಿಸಲಾಗಿದೆ. 18-09-2024ರಿಂದ ಏರ್ಪಡಿಸಲಾಗಿದ್ದ ಪರೀಕ್ಷೆಗೆ ಗೈರುಹಾಜರಾದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ಕಲ್ಪಿಸಲು 07-11-2024 ರಿಂದ 11-11-2024 ರವರೆಗೆ ಚಾಲನಾ ವೃತ್ತಿ ಪರೀಕ್ಷೆಯನ್ನು ನಿಗಮ ನಡೆಸಲಿದೆ.
ಈ ಸಂಬಂಧ ನಿಗಮ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಂಡಿದೆ.
ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಿ ಹುಮ್ನಾಬಾದ್ ತರಬೇತಿ ಕೇಂದ್ರದಲ್ಲಿ ಚಾಲನಾ ವೃತ್ತಿ ಪರೀಕ್ಷೆ ಪಡೆಯಲು ಆಯ್ಕೆ ಮಾಡಿಕೊಂಡಿದ್ದ ಅಭ್ಯರ್ಥಿಗಳಿಗೆ ಚಾಲನಾ ವೃತ್ತಿ ಪರೀಕ್ಷೆಯನ್ನು 18-09-2024 ರಿಂದ ನಡೆಸಲಾಗುತ್ತದೆ. ಈ ಸಂಬಂಧ ಎಲ್ಲಾ ಅಭ್ಯರ್ಥಿಗಳಿಗೆ ಕರೆಪತ್ರ ಡೌನ್-ಲೋಡ್ ಮಾಡಿಕೊಂಡು ನಿಗದಿತ ದಿನಾಂಕದಂದು ಹಾಜರಾಗಲು ಎಸ್. ಎಂ.ಎಸ್ ಸಂದೇಶ / ಪತ್ರಿಕಾ ಪ್ರಕಟಣೆ ಹಾಗೂ ನಿಗಮದ ಅಧಿಕೃತ ವೆಬ್-ಸೈಟ್ನಲ್ಲಿ ಪ್ರಕಟಣೆ ನೀಡುವ ಮೂಲಕ ಮಾಹಿತಿ ನೀಡಲಾಗಿತ್ತು. ಆದರೆ, ಕೆಲವೊಂದು ಅಭ್ಯರ್ಥಿಗಳು ನಿಗದಿತ ದಿನಾಂಕಗಳಂದು ಚಾಲನಾ ವೃತ್ತಿ ಪರೀಕ್ಷೆಗೆ ಹಾಜರಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ಅಂತಿಮವಾಗಿ ಗೈರುಹಾಜರಾದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ಕಲ್ಪಿಸಲು ದಿನಾಂಕ: 07-11-2024 ರಿಂದ 11-11-2024 ರವರೆಗೆ (ಭಾನುವಾರ ಹೊರತುಪಡಿಸಿ) ಚಾಲನಾ ವೃತ್ತಿ ಪರೀಕ್ಷೆ ನಡೆಸಲಾಗುತ್ತದೆ.
ಸದರಿ ಅಭ್ಯರ್ಥಿಗಳು ನಿಗಮದ ಅಧಿಕೃತ ವೆಬ್-ಸೈಟ್ ಮೂಲಕ ಕರೆಪತ್ರ ಡೌನ್ ಲೋಡ್ ಮಾಡಿಕೊಂಡು ತಮಗೆ ನಿಗಧಿಪಡಿಸಿರುವ ದಿನಾಂಕದಂದು ದಾಖಲೆಗಳೊಂದಿಗೆ ಹಾಜರಾಗುವ ಮೂಲಕ ಸದರಿ ಅವಕಾಶವನ್ನು ಉಪಯೋಗಿಸಿಕೊಳ್ಳಲು ಸೂಚಿಸಲಾಗಿದೆ.
ಹುಮ್ನಾಬಾದ್ ಚಾಲನಾ ಪಥವನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಈ ಅವಕಾಶವು ಅಂತಿಮ ಅವಕಾಶವಾಗಿದ್ದು, ತದನಂತರದಲ್ಲಿ ಹುಮ್ನಾಬಾದ್ ಚಾಲನಾ ಪಥದಲ್ಲಿ ಚಾಲನಾ ವೃತ್ತಿ ಪರೀಕ್ಷೆಗೆ ಅವಕಾಶವಿರುವುದಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.