ಬೆಂಗಳೂರು: ‘ಸಿʼ ವರ್ಗದ ದೇವಾಲಯಗಳ ಅರ್ಚಕರ, ನೌಕರರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಧನ, ಮರಣ ಉಪದಾನ ಹಾಗೂ ಅರ್ಚಕರುಗಳಿಗೆ ತಸ್ತೀಕ್ /ವರ್ಷಾಸನ ಹಣವನ್ನು ನೇರವಾಗಿ ಅರ್ಚಕರುಗಳ ಖಾತೆಗೆ ಜಮಾ ಮಾಡುವ ಕಾರ್ಯಕ್ರಮಕ್ಕೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.
ಬೆಂಗಳೂರಿನ ಶ್ರೀ ರಾಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ಡಾ|| ಎಂ.ವಿ.ವೆಂಕಟೇಶ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಡಾ|| ಬಿ.ಎಸ್.ಧ್ವಾರಕನಾಥ್, ಕೆ.ಎಂ.ನಾಗರಾಜು, ಮಲ್ಲಿಕಾ ಪ್ರಶಾಂತ ಪಕ್ಕಳ ಹಾಗೂ ವಿನಾಯಕ್ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಹಾಗೂ ವಿವಿಧ ಅರ್ಚಕರ ಸಂಘಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಚಿವ ರಾಮಲಿಂಗ ರೆಡ್ಡಿ ಚಾಲನೆ ನೀಡಿದರು..
‘ಸಿʼ ವರ್ಗದ ಅಧಿಸೂಚಿತ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ದೇವಾಲಯದ ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ ಮತ್ತು ಮರಣ ಉಪದಾನ ವಿತರಣೆ ಹಾಗೂ ಅರ್ಚಕರುಗಳಿಗೆ ತಸ್ತೀಕ್ /ವರ್ಷಾಸನ ಹಣವನ್ನು ನೇರವಾಗಿ ಅರ್ಚಕರ ಖಾತೆಗೆ ಜಮಾ ಮಾಡುವ ಯೋಜನೆ ಜಾರಿ ಬಗ್ಗೆ ಸಚಿವ ರಾಮಲಿಂಗ ರೆಡ್ಡಿ ಈ ಹಿಂದೆ ಭರವಸೆ ನೀಡಿದ್ದರು. ಇದೀಗ ಈ ಯೋಜನೆ ಜಾರಿಗೆ ಬಂದಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗೆ ಸೇರಿದ 33 ವಿದ್ಯಾರ್ಥಿಗಳಿಗೆ ರೂ.4,88,000/-ಗಳ ವಿದ್ಯಾರ್ಥಿ ವೇತನವನ್ನು ಹಾಗೂ ಇಬ್ಬರು ಅರ್ಚಕರ ಕುಟುಂಬದವರಿಗೆ ಸಚಿವರು ತಲಾ ರೂ.2 ಲಕ್ಷಗಳಂತೆ ಒಟ್ಟು ರೂ.4 ಲಕ್ಷ ರೂಗಳ ನೌಕರರ ಮರಣ ಉಪಧನ ವಿತರಿಸಿದರು.
ಇದಲ್ಲದೆ ರಾಜ್ಯದ ಒಟ್ಟು 7 ಜಿಲ್ಲೆಗಳ 158 ವಿದ್ಯಾರ್ಥಿಗಳಿಗೆ ರೂ.20,09,000/-ಗಳ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಿ, ಸಂಬಂಧಪಟ್ಟವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ವಿತರಿಸಲು ಆದೇಶಿಸಲಾಯಿತು.
ಸಿ ವರ್ಗದ ದೇವಾಲಯಗಳ ಅಭಿವೃದ್ದಿ ಹಾಗೂ ಅರ್ಚಕರುಗಳ ಕ್ಷೇಮಾಭಿವೃದ್ದಿಗಾಗಿ ಇನ್ನು ಹೆಚ್ಚಿನ ಅನುದಾನವನ್ನು ವೆಚ್ಚ ಮಾಡುವ ಉದ್ದೇಶದಿಂದ ಸಾಮಾನ್ಯ ಸಂಗ್ರಹಣಾ ನಿಧಿ ಮೊತ್ತವನ್ನು ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿದ್ದು, ಸನ್ಮಾನ್ಯ ರಾಜ್ಯಪಾಲರ ಅನುಮೋದನೆಗಾಗಿ ಮಸೂದೆಯನ್ನು ಕಳುಹಿಸಲಾಗಿದೆ. ಮಾನ್ಯ ರಾಜ್ಯಪಾಲರ ಕಛೇರಿ ಕೆಲವೊಂದು ಸ್ಪಷ್ಟೀಕರಣ ಒದಗಿಸಲು ತಿಳಿಸಿದ್ದು, ಅದರಂತೆ ಸವಿವರವಾದ ವಿವರಣೆಯನ್ನು ನೀಡಲಾಗಿದ್ದು, ಮಸೂದೆ ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದು ರಾಮಲಿಂಗ ರೆಡ್ಡಿ ತಿಳಿಸಿದರು.
ಈಗಾಗಲೇ ವಿಧಾನಮಂಡಲಗಳಲ್ಲಿ ಸದರಿ ಮಸೂದೆಯನ್ನು ಮಂಡಿಸಿ, ಚರ್ಚಿಸಲಾಗಿದ್ದು, ತಿದ್ದುಪಡಿಯೊಂದಿಗೆ ಅಂಗೀಕಾರವಾಗಿದೆ.
ಸನ್ಮಾನ್ಯ ರಾಜ್ಯಪಾಲರ ಅನುಮೋದನೆ ದೊರಕಿದ ಕೂಡಲೇ ಹೆಚ್ಚಾಗಿ ಸಂಗ್ರಹವಾಗುವ ಸಾಮಾನ್ಯ ಸಂಗ್ರಹಣಾ ನಿಧಿಯಲ್ಲಿ ದೇವಸ್ಥಾನಗಳ ಅರ್ಚಕರ/ ನೌಕರರ ಕ್ಷೇಮಾಭಿವೃದ್ಧಿಗಾಗಿ ಈ ಕೆಳಕಂಡ ಯೋಜನೆಯನ್ನು ರೂಪಿಸಲು ಈಗಾಗಲೇ ರೂಪುರೇಷೆ ತಯಾರು ಮಾಡಲಾಗಿದೆ ಎಂದವರು ಮಾಹಿತಿ ನೀಡಿದರು.
ಯೋಜನೆಯ ಹೈಲೈಟ್ಸ್ ಹೀಗಿದೆ:
-
ಪ್ರತಿ ವರ್ಷ ‘ಸಿ’ ವರ್ಗದ1500 ದೇವಾಲಯಗಳಿಗೆ ರೂ.5 ಲಕ್ಷ ಅನುದಾನ ಬಿಡುಗಡೆ
-
ಪ್ರತಿ ವರ್ಷ ಅರ್ಚಕರ / ನೌಕರರ ಕನಿಷ್ಠ 3000 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವುದು.
-
ಪ್ರತಿ ವರ್ಷ 1000 ಅರ್ಚಕರು/ನೌಕರರುಗಳಿಗೆ ವಸತಿ ಕಲ್ಪಿಸಲು ಅನುವಾಗುವ ನಿಟ್ಟಿನಲ್ಲಿ ರೂ.5 ಲಕ್ಷ ಧನ ಸಹಾಯ.
-
ಸಮಸ್ತ ಅರ್ಚಕರು/ ನೌಕರರಿಗೆ ರೂ. 5 ಲಕ್ಷ ವಿಮಾ ಯೋಜನೆಯ ಪ್ರೀಮಿಯಂ ಪಾವತಿಸಲು ಈ ಹಣ ವಿನಿಯೋಗ ಇತರೆ ಪ್ರಮುಖ ಕಾರ್ಯಯೋಜನೆಗಳನ್ನು ಸಿದ್ಧಪಡಿಸಲಾಗಿದೆ.
ಈ ಸಂದರ್ಭದಲ್ಲಿ ವಿವಿಧ ಅರ್ಚಕರ ಸಂಘಗಳ ಅಧ್ಯಕ್ಷರುಗಳಾದ ಶ್ರೀ ಶ್ರೀವತ್ಸ, ಶ್ರೀ ವೆಂಕಟಚಲಯ್ಯ ಮತ್ತು ಶ್ರೀ ಕೆ.ಎಸ್. ಎನ್ ದೀಕ್ಷಿತ್ ರವರು ಮಾತನಾಡಿ, ರಾಜ್ಯದಲ್ಲಿ 34,564 ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಾಲಯಗಳಿದ್ದು, ಇದರಲ್ಲಿ 34,166 ಸಿ ವರ್ಗದ ದೇವಾಲಯಗಳಿದ್ದು, ಮಾನ್ಯ ರಾಜ್ಯಪಾಲರು ಸದರಿ ಕಾಯ್ದೆಗೆ ಅನುಮೋದನೆ ನೀಡಿದರೆ, ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಈ ದೇವಾಲಯಗಳ ಅಭಿವೃದ್ದಿ ಹಾಗೂ ಅರ್ಚಕರುಗಳ ಕ್ಷೇಮಾಭಿವೃದ್ದಿಗೆ ಹಣ ವಿನಿಯೋಗಿಸಲು ತುಂಬಾ ಅನುಕೂಲವಾಗುತ್ತದೆ. ಇಲ್ಲಿಯವರೆಗೆ ನಮ್ಮಗಳ ಬಗ್ಗೆ ಯಾರೂ ಕಾಳಜಿವಹಿಸದೇ ಇದ್ದುದರಿಂದ, ದೇವಸ್ಥಾನಗಳ ಅರ್ಚಕರ /ನೌಕರರ ಶ್ರೇಯೋಭಿವೃದ್ಧಿಯಾಗಿರುವುದಿಲ್ಲ. ಈ ಮಸೂದೆಯು ನಮಗೆ ಆಶಾಕಿರಣವಾಗಿದೆ ಆದರೆ ಇದುವರೆಗೂ ಮಾನ್ಯ ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕದಿರುವುದು ದೈವ ಕಾರ್ಯವನ್ನು ನಿರ್ವಹಿಸುವ ಸಹಸ್ರಾರು ಅರ್ಚಕರು/ನೌಕರರ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ತಿಳಿಸುತ್ತಾ, ಮಾನ್ಯ ರಾಜ್ಯಪಾಲರು ಶೀಘ್ರದಲ್ಲಿಯೇ ಸದರಿ ಮಸೂದೆಗೆ ಅಂಕಿತ ಹಾಕುವ ಭರವಸೆ ಇದೆ ಎಂದು ತಿಳಿಸಿದರು.