ಚಿಕ್ಕಮಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ದಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿರುವ ಪ್ರತಿಪಕ್ಷಗಳು, ಮುಖ್ಯಮಂತ್ರಿಯವರು ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಸಹಿತ ಸ್ಪಷ್ಟನೆ ನೀಡಿದ್ದರೂ, ಸುಳ್ಳನ್ನು ಸತ್ಯ ಮಾಡುವ ಪ್ರಯತ್ನ ನಡೆಸುತ್ತಿವೆ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಯನ್ನೂ ಹೊಂದಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಆರೋಪಿಸಿದ್ದಾರೆ.
ಚಿಕ್ಕಮಗಳೂರು ಪ್ರೆಸ್ ಕ್ಲಬ್ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿದ ಅವರು, “ಮುಖ್ಯಮಂತ್ರಿಯವರ ಪತ್ನಿಗೆ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಿರುವುದು ಅಕ್ರಮ ಎಂಬುದು ಪ್ರತಿಪಕ್ಷದವರ ಆರೋಪ. ಆದರೆ, 50:50 ಅನುಪಾತದಲ್ಲಿ ಹಂಚಿಕೆ ಮಾಡುವ ನಿರ್ಧಾರ ಕೈಗೊಂಡಿದ್ದು ಯಾರು? ಬಿಜೆಪಿ ಸರ್ಕಾರವಲ್ಲವೇ,”? ಎಂದು ಪ್ರಶ್ನಿಸಿದರು.
“ಈಗ ಅವರು ಮುಖ್ಯಮಂತ್ರಿಗಳ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ. ಈ ಆರೋಪದಲ್ಲಿ ಸತ್ಯಾಂಶವೇ ಇಲ್ಲ. ವಾಲ್ಮೀಕಿ ನಿಗಮ ಹಗರಣ ಕುರಿತು ಸದನದಲ್ಲಿ ಚರ್ಚಿಸಿದ ಪ್ರತಿಪಕ್ಷದವರು ಸರ್ಕಾರ, ಮುಖ್ಯಮಂತ್ರಿಗಳ ವಿರುದ್ಧ ಸಲ್ಲದ ಆರೋಪಗಳನ್ನು ಮಾಡಿದರು. ಬಳಿಕ ಉತ್ತರಕ್ಕೂ ಅವಕಾಶ ನೀಡದೆ, ರಾಜಕಾರಣ ಮಾಡಿದರು. ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿ ಮೂಲಕ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಸರ್ಕಾರದಲ್ಲಿ ಅಕ್ರಮ ನಡೆದಿಲ್ಲ ಎಂಬುದನ್ನು ದಾಖಲೆಗಳ ಸಹಿತ ಬಹಿರಂಗಪಡಿಸಿದ್ದಾರೆ. ಆದರೂ, ಪ್ರತಿಪಕ್ಷದವರು ತಮ್ಮ ಆರೋಪ ಮುಂದುವರಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ವಿರುದ್ಧದ ಆರೋಪಗಳಿಗೆ ಅವರ ಬಳಿ ದಾಖಲೆಗಳಿಲ್ಲ. ಆದರೂ, ತಮ್ಮ ಸುಳ್ಳುಗಳನ್ನೇ ಸತ್ಯ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ,” ಎಂದು ಕಿಡಿ ಕಾರಿದರು.
“ಇಂತಹ ವಿಚಾರಗಳಲ್ಲಿ ಮಾಧ್ಯಮಗಳು ಸತ್ಯ ಸಂಗತಿಯನ್ನು ಬೆಳಕಿಗೆ ತರಬೇಕು ಎಂಬ ಉದ್ದೇಶದಿಂದ ನಾನು ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ. ಏಕೆಂದರೆ, ಈ ಹಿಂದೆ ಐಎಎಸ್ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಮೇಲೆ ಆರೋಪ ಕೂರಿಸಲಾಗಿತ್ತು . ಆದರೆ, ಸಿಬಿಐ ತನಿಖೆ ನಡೆದು ನನ್ನನ್ನು ವಿಚಾರಣೆಗೂ ಕರೆಯಲಿಲ್ಲ. ಅಂತಿಮ ವರದಿಯಲ್ಲಿ ಈ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಸಿಬಿಐ ಹೇಳಿತ್ತು. ಆದರೆ, ಮಾಧ್ಯಮಗಳು ಅದನ್ನು ಪ್ರಸಾರ ಮಾಡಲೇ ಇಲ್ಲ. ಮುಖ್ಯಮಂತ್ರಿಯವರ ಪ್ರಕರಣದಲ್ಲೂ ಈ ರೀತಿ ಆಗಬಾರದು,” ಎಂದು ತಿಳಿಸಿದರು.
“ರಾಜಕಾರಣಿಗಳು ತಪ್ಪು ಮಾಡಿದಾಗ ಟೀಕಿಸುವುದು ಮಾಧ್ಯಮಗಳ ಜವವಾಬ್ದಾರಿ. ಅದೇ ರೀತಿ ಅವರು ಒಳ್ಳೆಯ ಕೆಲಸ ಮಾಡಿದಾಗಲೂ ಅದನ್ನು ಬೆಂಬಲಿಸಿ ಬೆನ್ನು ತಟ್ಟುವ ಕೆಲಸ ಮಾಡಬೇಕು ಎಂದು ಹೇಳಿದ ಅವರು, ಚಿಕ್ಕಮಗಳೂರು ಪತ್ರಕರ್ತರ ಸಂಘಕ್ಕೆ ನಿವೇಶನ ಮತ್ತು ಕಟ್ಟಡ ಒದಗಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು,” ಎಂದು ಜಾರ್ಜ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮಟೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಪಾಲ್ಗೊಂಡಿದ್ದರು.