ಬೆಂಗಳೂರು: ರಾಜ್ಯ ಸರ್ಕಾರ ಅಚ್ಚರಿಯ ನಿರ್ಧಾರವೊಂದರಲ್ಲಿ ಮೂಡಾ ಹಗರಣದ ತನಿಖೆ ನಡೆಸಲು ನ್ಯಾಯಾಧೀಶರ ಸಮಿತಿ ರಚಿಸಿ ಅಧಿಸೂಚನೆ ಹೊರಡಿಸಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಹಗರಣದಲ್ಲಿ ಸಿಎಂ ಕುಟುಂಬದ ವಿರುದ್ದವೇ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಎದುರಾಗಬಹುದಾದ ಮುಜುಗರದಿಂದ ಪಾರಾಗಲು ಸಿದ್ದರಾಮಯ್ಯ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ ಎನ್ನಲಾಗುತ್ತಿದೆ.
ಮೂಡಾ ಮೂಲಕ ಸಿಎಂ ಸಿದ್ದರಾಮಯ್ಯ ಪತ್ನಿಗೆ ಅಕ್ರಮವಾಗಿ ಸೈಟ್ ಹಂಚಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಸಹಿತ ಹಲವು ಸಂಘಟನೆಗಳು ದೂರು ನೀಡಿ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದ್ದವು. ಪ್ರತಿಪಕ್ಷಗಳೂ ಸಿಬಿಐ ತನಿಖೆಗೆ ಒತ್ತಾಯಿಸಿ ಪ್ರತಿಭಟನೆಯನ್ನೂ ನಡೆಸಿದೆ. ಈ ಬೆಳವಣಿಗೆಗಳ ನಡುವೆಯೇ ರಾಜ್ಯ ಸರ್ಕಾರ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶ ಹೊರಡಿಸಿದೆ.
ಅಧಿಸೂಚನೆ ಹೀಗಿದೆ:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ವಿಷಯದಲ್ಲಿ ಆರೋಪಗಳು ಸರ್ಕಾರದ ಗಮನಕ್ಕೆ ಬಂದಿರುವುದಲ್ಲದೆ, ಕುರಿತು ದಿನ ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿಯೂ ಸಹ ವರದಿಯಾಗಿರುತ್ತದೆ. ಈ ಪ್ರಕರಣದಲ್ಲಿ ವಿಚಾರಣೆ ನಡೆಸುವುದು ಸೂಕ್ತವೆಂದು ಮನಗಂಡು, Commission of Inquiry Act, 1952ರ ನಿಯಮ 3 ರ ಉಪನಿಯಮ (1) ರನ್ವಯ ಮಾನ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ನಡೆಸಲು ವಿಚಾರಣಾ ಆಯೋಗವನ್ನು ರಚಿಸಲು ಸರ್ಕಾರವು ತೀರ್ಮಾನಿಸಿದೆ.
ಇದನ್ನೂ ಓದಿ.. ಅಂದು ‘ಜಿಂದಾಲ್’ ಹೊಡೆತಕ್ಕೆ BSY ತಲೆದಂಡ; ಇದೀಗ ಸಿದ್ದು ಗದ್ದುಗೆಗೆ ‘ಮೂಡಾ’ ಕಂಟಕ; CM ಕುಟುಂಬದ ಹಗರಣ ವಿರುದ್ಧ ‘ಸಿಟಿಜನ್ ರೈಟ್ಸ್’ ಸಮರ
ಆರೋಪಗಳ ಬಗ್ಗೆ ವಿಚಾರಣೆಯನ್ನು ನಡೆಸಲು Commission of Inquiry Act, 1952ರ ನಿಯಮ 3ರ ಉಪನಿಯಮ (1)ರನ್ವಯ ಪ್ರದತ್ತವಾದ ಅಧಿಕಾರದನ್ವಯ ಸರ್ಕಾರವು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಶ್ರೀ ಪಿ.ಎನ್.ದೇಸಾಯಿ, ರವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಿದೆ.
Commissions of Inquiry Act, 1952 ಹಾಗೂ Code of Civl Procedure ರಲ್ಲಿನ ಅವಕಾಶದಡಿ ವಿಚಾರಣೆ ನಡೆಸಲು ಎಲ್ಲಾ ಅಧಿಕಾರವನ್ನು ಹೊಂದಿರುತ್ತದೆ ಹಾಗೂ ತನಿಖೆಯನ್ನು 06 ತಿಂಗಳೊಳಗಾಗಿ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸತಕ್ಕದ್ದೆಂದು ಸರ್ಕಾರವು ಅಪೇಕ್ಷಿಸುತ್ತದೆ. ವಿಚಾರಣಾ ಆಯೋಗದ Terms of Reference ಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು.
ಈ ವಿಚಾರಣಾ ಆಯೋಗಕ್ಕೆ ಸಮಗ್ರ ಮಾಹಿತಿ/ದಾಖಲೆಗಳನ್ನು ಒದಗಿಸಿ ಆಯೋಗವು ವಿಚಾರಣೆಯನ್ನು ಪೂರ್ಣಗೊಳಿಸಲು ಹಾಗೂ ತಾಂತ್ರಿಕ ಸಲಹೆಗಾರರು/ಆರ್ಥಿಕ ಸಲಹೆಗಾರರು/ ಆಡಳಿತಾತ್ಮಕ ಸಲಹೆಗಾರರನ್ನು ಒದಗಿಸಲು ನಗರಾಭಿವೃದ್ಧಿ ಇಲಾಖೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸಹಕರಿಸತಕ್ಕದ್ದು.
ವಿಚಾರಣೆ ಆಯೋಗಕ್ಕೆ ಸಂಬಂಧಪಟ್ಟಂತೆ ನಗರಾಭಿವೃದ್ಧಿ ಇಲಾಖೆಯ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಆಯೋಗವು ಕಾಲಾನುಕಾಲಕ್ಕೆ ವಿಚಾರಣೆಗಾಗಿ ಅಪೇಕ್ಷಿಸುವ ಎಲ್ಲಾ ಕಡತಗಳು/ ದಾಖಲಾತಿಗಳು/ ಇತ್ಯಾದಿಗಳನ್ನು ಒದಗಿಸತಕ್ಕದ್ದು ಹಾಗೂ ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದು, ವಿಚಾರಣಾ ಆಯೋಗದೊಂದಿಗೆ ಸಂಪೂರ್ಣವಾಗಿ ಸಹಕರಿಸತಕ್ಕದ್ದು ಎಂದು ಒಳಾಡಳಿತ ಇಲಾಖೆ ಭಾನುವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.