ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯಲ್ಲಿ ಚಾಲಕ-ಕಂ-ನಿರ್ವಾಹಕ ಹುದ್ದೆಗಳ ನೇಮಕಾತಿ ಸಂಬಂಧ ಅಭ್ಯರ್ಥಿಗಳ ಮೂಲ ದಾಖಲಾತಿ / ದೇಹದಾರ್ಢ್ಯತೆ ಪರಿಶೀಲನೆಯನ್ನು ನಡೆಸಲಾಗುತ್ತಿದ್ದು ನಿಗದಿತ ದಿನಾಂಕದಂದು ಅಭ್ಯರ್ಥಿಗಳು ಹಾಜರಾಗುವಂತೆ ನಿಗಮದ ಪ್ರಕಟಣೆ ತಿಳಿಸಿದೆ.
ಕರಾರಸಾ ನಿಗಮದಲ್ಲಿ ಜಾಹೀರಾತು ಸಂ.1/2020 ದಿನಾಂಕ: 14-02-2020 ರನ್ವಯ ಚಾಲಕ-ಕಂ-ನಿರ್ವಾಹಕ ಹುದ್ದೆಯ ಮೂಲ ದಾಖಲಾತಿ / ದೇಹದಾರ್ಢ್ಯತೆ ಪರಿಶೀಲನೆಯನ್ನು KSRTC ಕೇಂದ್ರ ಕಚೇರಿಯಲ್ಲಿ ನಡೆಸಲಾಗುತ್ತಿದೆ. ಮೂಲ ದಾಖಲಾತಿ ಪರಿಶೀಲನೆಗೆ ಗೈರು ಹಾಜರಾದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡುವುದು ಸೂಕ್ತವೆಂದು ನಿರ್ಧರಿಸಿ 02-07-2024ರಿಂದ ಅವಕಾಶ ನೀಡಿ ದಿನಾಂಕ ನಿಗದಿಪಡಿಸಲಾಗಿದೆ. ಅದರಂತೆ ಗೈರುಹಾಜರಾದ ಅಭ್ಯರ್ಥಿಗಳಿಗೆ ಎಸ್. ಎಂ.ಎಸ್ ಮೂಲಕ ಮಾಹಿತಿ ನೀಡಿದ್ದು, ನಿಗಮದ ಅಧಿಕೃತ ವೆಬ್-ಸೈಟ್ ksrtcjobs.karnataka.gov.in ರಿಂದ ಅಂತಿಮ ಕರೆಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯ ಮೂಲ ದಾಖಲಾತಿಗಳೊಂದಿಗೆ ನಿಗದಿತ ದಿನಾಂಕ ಅಥವಾ13-07-2024 ರೊಳಗಾಗಿ ತಪ್ಪದೇ ಹಾಜರಾಗಲು ಆಯ್ಕೆ ಸಮಿತಿಯ ಅಧ್ಯಕ್ಷರೂ ಆದ ನಿಗಮದ ನಿರ್ದೇಶಕರು (ಸಿ & ಜಾ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದು ಅಂತಿಮ ಅವಕಾಶವಾಗಿದ್ದು, ತದನಂತರ ಬಂದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಈ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.