ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ʼಎಮರ್ಜೆನ್ಸಿʼ ಚಿತ್ರ ತೆರೆಕಾಣಲು ಸಜ್ಜಾಗಿದ್ದು ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಬಿಜೆಪಿ ಸಂಸದೆಯೂ ಆಗಿರುವ ಕಂಗನಾ ರಣಾವತ್ ಅವರು ಈ ಸಿನಿಮಾದಲ್ಲಿ ‘ಇಂದಿರಾ ಗಾಂಧಿ’ ಪಾತ್ರದಲ್ಲಿ ನಟಿಸಿಸಿದ್ದಾರೆ.
ಭಾರತದ ಇತಿಹಾಸದಲ್ಲಿಯೇ ಕಪ್ಪು ಚುಕ್ಕೆಯಾಗಿರುವ ತುರ್ತು ಪರಿಸ್ಥಿತಿಯ 50ನೇ ವರ್ಷಾಚರಣೆಯ ಆರಂಭದಲ್ಲಿ, ಸೆಪ್ಟೆಂಬರ್ 6ರಂದು ಬಹು ನಿರೀಕ್ಷೆಯ ʼಎಮರ್ಜೆನ್ಸಿʼ ಚಿತ್ರದ ಬಿಡುಗಡೆಯಾಗಲಿದೆ. ಲೋಕಸಭಾ ಚುನಾವಣೆಯಲ್ಲಿ ಕಂಗನಾ ಸ್ಪರ್ಧಿಸಿದ್ದ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿತ್ತು. ಈ ಚಿತ್ರದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಸಹಿತ ಅನೇಕರು ನಟಿಸಿದ್ದಾರೆ. ಕಂಗನಾ ಅವರು ಇಂದಿರಾ ಗಾಂಧಿ ಅವರನ್ನೇ ಹೋಲುವ ರೀತಿಯಲ್ಲೇ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎನ್ನಲಾಗಿದೆ.
ಈ ನಡುವೆ, ‘ತುರ್ತುಪರಿಸ್ಥಿತಿ’ ಮತ್ತು ‘ಇಂದಿರಾಗಾಂಧಿ’ ಬಗ್ಗೆ ಟೀಕಿಸುತ್ತಿರುವ ಬಿಜೆಪಿ ಇದೀಗ ತಮ್ಮ ಪಕ್ಷದ ಸಂಸದೆಯೇ ನಿರ್ದೇಶಿಸಿ, ನಟಿಸಿರುವ ʼಎಮರ್ಜೆನ್ಸಿʼ ಸಿನಿಮಾವನ್ನು ಯಾವ ರೀತಿ ತೆಗೆದುಕೊಳ್ಳುತ್ತದೆ ಎಂಬುದೇ ಕುತೂಹಲದ ಸಂಗತಿ.