ಮಂಡ್ಯ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿರುವ ಸಂಸದೆ ಸುಮಲತಾ ಅಂಬರೀಶ್, ಸದ್ಯವೇ ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.
ಬಿಜೆಪಿಯಿಂದ ಟಿಕೆಟ್ ವಂಚಿತರಾಗಿರುವ ಸುಮಲತಾ ಅಂಬರೀಶ್ ಅವರು ತಮ್ಮ ರಾಜಕೀಯ ನಡೆ ಬಗ್ಗೆ ಘೋಷಣೆ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ನಡೆದ ಬೆಂಬಲಿಗರ ಸಭೆ ಕುತೂಹಲದ ಕೇಂದ್ರಬಿಂದುವಾಗಿತ್ತು. ಸಭೆಯಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಸುಮಲತಾ ಅಂಬರೀಶ್, ಸಕ್ಕರೆ ನಾಡು ಮಂಡ್ಯ ಬಿಟ್ಟು ಬೇರೆ ಕಡೆ ನನ್ನ ರಾಜಕೀಯ ಜೀವನವಿಲ್ಲ ಎಂದರು.
ಮಂಡ್ಯ ಮಣ್ಣಿನ ಸೊಸೆಯಾಗಿ ಜಿಲ್ಲೆಯ ಜನರ ಕೈಬಿಡಲು ನಾನು ಇಷ್ಟಪಡುವುದಿಲ್ಲ ಎನ್ಬುತ್ತಲೇ, ಮಂಡ್ಯದ ಜಿಲ್ಲೆಯ ಜನ ನನಗೆ ತಾಯಿ ಸ್ಥಾನ ನೀಡಿದ್ದೀರಿ, ಈ ತಾಯಿಯನ್ನು ಮಕ್ಕಳಿಂದ ದೂರ ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದರು.
ಕಳೆದ ಬಾರಿಯ ಚುನಾವಣೆ ಭಿನ್ನವಾಗಿತ್ತು. ಅದರಂತೆಯೇ ಈ ಬಾರಿ ಹಠಕ್ಕೆ ಬಿದ್ದು ನಾನು ಪಕ್ಷೇತರಳಾಗಿ ಸ್ಪರ್ಧೆ ಮಾಡುವುದಿಲ್ಲ ಎಂದ ಸುಮಲತಾ, ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ನನ್ನ ಬೆಂಬಲ ನೀಡುತ್ತೇನೆ ಎಂದರು.
ಮೋದಿಯವರ ಆಡಳಿತ ವೈಖರಿಯನ್ನು ಶ್ಲಾಘಿಸಿದ ಸುಮಲತಾ, ನರೇಂದ್ರ ಮೋದಿಯವರ ದೇಶಪರ ಕಾಳಜಿ, ಕೆಲಸಗಳನ್ನು ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದರು.