ಗದಗ್: ಉತ್ತರ ಕರ್ನಾಟಕದ ಜನರ ಹೆಮ್ಮೆಯ ರಥ- ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇದೀಗ ಪ್ರಗತಿಯ ಪಥದತ್ತ ಸಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಸಕಲ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಭರವಸೆ ನೀಡಿದ್ದಾರೆ.
ಗದಗ್ ನೂತನ ಬಸ್ ನಿಲ್ದಾಣದಲ್ಲಿ ಶನಿವಾರ ನೂತನ ಬಸ್ಸುಗಳ ಲೋಕಾರ್ಪಣೆ , ಸಂಸ್ಥೆಯ ಬಸ್ ಗಳಲ್ಲಿ ನಗದು ರಹಿತ ವ್ಯವಸ್ಥೆ ಜಾರಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪಘಾತ ರಹಿತ ಚಾಲನೆ ಮಾಡಿರುವ ಸಾರಿಗೆ ಸಂಸ್ಥೆ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಲಾಯಿತು.
-
ಮುಂಬರುವ ಏಪ್ರಿಲ್ ತಿಂಗಳೊಳಗೆ 645 ಹೊಸ ಬಸ್ಸುಗಳ ಸೇರ್ಪಡೆಗೆ ಸಿದ್ಧತೆ ನಡೆದಿದೆ..
-
ಈ ಪೈಕಿ ಇದೀಗ 50 ಬಸ್ಸುಗಳನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರು ಲೋಕಾರ್ಪಣೆ ಮಾಡಿದ್ದಾರೆ..
-
ಇದೇ ಸಂದರ್ಭದಲ್ಲಿ ಅಪಘಾತ ರಹಿತ ಚಾಲನೆ ಮಾಡಿರುವ 48 ಮಂದಿ ಸಾರಿಗೆ ಸಂಸ್ಥೆ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಲಾಗಿದೆ..
ಈ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಗಳು ಉತ್ತಮವಾಗಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಜನರಿಂದಲೂ ಸ್ಲಾಘನೆ ವ್ಯಕ್ತವಾಗುತ್ತಿದೆ ಎಂದರು. ತಮ್ಮ ಅಧಿಕಾರ ಅವಧಿಯಲ್ಲಿ ಈಗಾಗಲೇ ಗದಗ್ ಜಿಲ್ಲೆಯಲ್ಲಿ ನೂತನ ಘಟಕ, ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡುವುದಾಗಿ ಭರವಸೆ ನೀಡಿದರು.
ಗದಗ್ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಹೆಚ್.ಕೆ.ಪಾಟೀಲ್ ಮಾತನಾಡಿ, ಸಾರ್ವಜನಿಕರಿಗೆ ಸಾಕಷ್ಟು ಸೌಲಭ್ಯಗಳು ಸಿಗುವಂತೆ ಗದಗ್ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವಂತೆ ಗದಗ ಗೆ ನೂತನ ಪಲ್ಲಕ್ಕಿ ಬಸ್ ಗಳನ್ನು ಒದಗಿಸುವಂತೆ ಹಾಗೂ ತುಂಬಾ ಹಳೆಯ ಕಟ್ಟಡವಾಗಿರುವ ಗದಗ್ ಬಸ್ ಘಟಕವನ್ನು ನವೀಕರಿಸುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್., ಮಾಜಿ ಶಾಸಕ ಡಿ ಆರ್ ಪಾಟೀಲ್, ಕಾಂಗ್ರೆಸ್ ನಾಯಕರಾದ ಗುರಣ್ಣ ಬಳಗಾನೂರ, ಬಿ.ಬಿ.ಅಸೂಟಿ, ಸಿದ್ದು ಪಾಟೀಲ, ಗದಗ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಸೇರಿದಂತೆ ಅನೇಕ ಗಣ್ಯರು ಬಾಗವಹಿಸಿದ್ದರು.