ಚಿತ್ರ: ಮಂಜು ನೀರೇಶ್ವಾಲ್ಯ..
ಮಂಗಳೂರು: ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ ನೂತನವಾಗಿ ನಿರ್ಮಿಸಲಾದ ಬೆಳ್ಳಿ ಪಲ್ಲಕಿ ಯನ್ನು ಶೀಘ್ರದಲ್ಲೇ ಸಮರ್ಪಿಸಲಾಗುವುದು .ಅದರ ಪೂರ್ವಭಾವಿಯಾಗಿ ಶನಿವಾರ (ಫೆಬ್ರವರಿ3) ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ನೂತನ ಬೆಳ್ಳಿ ಪಲ್ಲಕಿಯ ಪುರ ಪ್ರವೇಶ ಕಾರ್ಯಕ್ರಮ ನಡೆಯಿತು .
ಪಲ್ಲಕಿಯ ಮೆರವಣಿಗೆಯು ಶ್ರೀ ದೇವಳದ ಬಳಿಯಿಂದ ಸಾಯಂಕಾಲ 6 ಗಂಟೆಗೆ ಹೊರಟು ಮಹಾಮಾಯ ದೇವಸ್ಥಾನ , ಡೊಂಗರಕೇರಿ, ಚಿತ್ರಾ ಜಂಕ್ಷನ್, ಸ್ವದೇಶೀ ಸ್ಟೋರ್ಸ್ ಮೂಲಕ ರಥಬೀದಿ ಮೂಲಕ ಸುಮಾರು 7 00 ಗಂಟೆಗೆ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಆಗಮನದ ಬಳಿಕ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಭವ್ಯ ಶೋಭಾ ಯಾತ್ರೆ ನಡೆಯಿತು .

ದೇವಳಕ್ಕೆ ತಲುಪಿದ ತದನಂತರ ಶ್ರೀಗಳ ಉಪಸ್ಥಿತಿಯಲ್ಲಿ ಶ್ರೀ ದೇವರ ರಾತ್ರಿ ಪೂಜೆ ಬಳಿಕ ಶ್ರೀ ವೆಂಕಟರಮಣ ದೇವಳದ ಶ್ರೀ ದೇವರ ಉತ್ಸವಕ್ಕಾಗಿ ನೂತನವಾಗಿ ನಿರ್ಮಿಸಲಾದ ಸ್ವರ್ಣ ಲಾಲ್ಕಿ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಕಿರಣ್ ಪೈ, ಸತೀಶ್ ಪ್ರಭು, ಗಣೇಶ್ ಕಾಮತ್, ಜಗನ್ನಾಥ್ ಕಾಮತ್, ಉದ್ಯಮಿ ಪಿ .ದಯಾನಂದ ಪೈ ಹಾಗೂ ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು .




























































