ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ-ಕುಂಟನಹಳ್ಳಿ ರಸ್ತೆಯಲ್ಲಿ ಸೋಮವಾರ ರಾತ್ರಿ ಸುಮಾರ 8 ಗಂಟೆ ವೇಳೆಯಲ್ಲಿ ಬೈಕ್ ಸವಾರರಿಗೆ ಚಿರತೆ ಕಾಣಿಸಿದೆ.
ಹುಸ್ಕೂರು ಗ್ರಾಮದ ಯುವಕರು ಬೈಕ್’ನಲ್ಲಿ ತೆರಳುತ್ತಿದ್ದಾಗ ಚಿರತೆಯೊಂದು ಬೈಕ್ ಗೆ ಅಡ್ಡವಾಗಿ ಬಂದಿದೆ. ಈ ದೃಶ್ಯವನ್ನು ಬೈಕ್ ಸವಾರರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಚಿರತೆ ಕಾಣಿಸಿಕೊಂಡ ಸ್ಥಳದಿಂದ ಸುಮಾರು ಅರ್ಧ ಕಿಮೀ ದೂರದಲ್ಲಿ ಗಂಡ್ರಗೊಳ್ಳಿಪುರ ಅರಣ್ಯ ಪ್ರದೇಶವಿದ್ದು ಆ ಕಡೆಯಿಂದ ಚಿರತೆ ಬಂದಿರಬಹುದು ಎಂದು ಶಂಕಿಸಲಾಗಿದೆ. ಚಿರತೆ ಕುಂಟನಹಳ್ಳಿ ರಸ್ತೆಯಿಂದ ಅರಳುಮಲ್ಲಿಗೆ ಕೆರೆ ಕಡೆಗೆ ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಸುತ್ತಾಮುತ್ತಾ ಗ್ರಾಮಗಳಲ್ಲಿ ಚಿರತೆ ಸಂಚಾರ ಮಾಡಿರುವುದು ಸಿ.ಸಿ.ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ನಂತರ ಸಾಸಲು ಹೋಬಳಿಯ ಕುಕ್ಕಲಹಳ್ಳಿ ಗ್ರಾಮದಲ್ಲಿ ಮೇಕೆಯನ್ನ ಹೊತ್ತೊಯ್ದು ಬಲಿ ಪಡೆದಿತ್ತು. ಇದೀಗ ಕುಂಟನಹಳ್ಳಿ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಇದರಿಂದ ತಾಲೂಕಿನ ಜನರಲ್ಲಿ ಜೀವಭಯ ಕಾದಿದ್ದು, ಕೂಡಲೇ ಚಿರತೆಗಳನ್ನ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.






















































