ಬೆಂಗಳೂರು: ಸಾರಿಗೆ ಕ್ಷೇತ್ರದಲ್ಲಿ ಮತ್ತೆ 300 ಹುದ್ದೆಗಳ ನೇಮಕಾತಿಗೆ KSRTC ಪ್ರಕ್ರಿಯೆ ಆರಂಭಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 300 ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಹುದ್ದೆಗಳಿಗೆ ಸೋಮವಾರ ಕರೆಪತ್ರ ಬಿಡುಗಡೆ ಮಾಡಲಾಗುತ್ತಿದೆ ಎಂದು ನಿಗಮ ತಿಳಿಸಿದೆ. ಡಿಸೆಂಬರ್ 26ರಿಂದ ಬೆಂಗಳೂರಲ್ಲಿ ದಾಖಲಾತಿ, ದೇಹದಾರ್ಢ್ಯತೆ ಪರಿಶೀಲನೆ ನಡೆಯಲಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಂಡಿರುವ KSRTC, ನಿಗಮದಲ್ಲಿ ಜಾಹೀರಾತು ಸಂ.1/2018 ತಾಂತ್ರಿಕ ಸಹಾಯಕ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ಆ ಅಧಿಸೂಚನೆಯಲ್ಲಿನ ಹುದ್ದೆಗಳ ಸಂಖ್ಯೆಯನ್ನು 300 ಕ್ಕೆ ಸೀಮಿತಗೊಳಿಸಿ ಹುದ್ದೆಗಳ ವರ್ಗೀಕರಣವನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದೆ.
ಅಧಿಸೂಚನೆಯ ಕ್ರ.ಸಂ. VIIರಲ್ಲಿ ತಿಳಿಸಿರುವ ಆಯ್ಕೆ ವಿಧಾನದಂತೆ 02-02-2020ರಂದು ನಡೆದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಕನಿಷ್ಟ 30 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದ ಅಭ್ಯರ್ಥಿಗಳಿಗೆ 26-12-2023 ರಿಂದ 28-12-2023 ರವರೆಗೆ ಬೆಳಗ್ಗೆ 9.30 ರಿಂದ ಬೆಂಗಳೂರಿನ ಶಾಂತಿನಗರದಲ್ಲಿರುವ KSRTC ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಈ ಕುರಿತು ಅರ್ಹ ದಾಖಲಾತಿ/ ದೇಹದಾರ್ಡ್ಯತೆ ಪರಿಶೀಲನೆ ನಡೆಸಲಾಗುತ್ತದೆ.
ಅಭ್ಯರ್ಥಿಗಳು 18-12-2023 ರಂದು ಮಧ್ಯಾಹ್ನ 100 ಗಂಟೆಯ ನಂತರ ಕರೆಪತ್ರ ಡೌನ್-ಲೋಡ್ ಮಾಡಿಕೊಳ್ಳಲು ಈಗಾಗಲೇ ಅರ್ಜಿಯಲ್ಲಿ ನಮೂದಿಸಿರುವ ಮೊಬೈಲ್ ಸಂಖ್ಯೆಗೆ SMS ಮೂಲಕ ತಿಳಿಸಲಾಗಿದೆ. ನಿಗಮದ ಅಧಿಕೃತ ವೆಬ್-ಸೈಟ್ ಆದ ksrtcjobs.com ರಲ್ಲಿ ಕರೆಪತ್ರವನ್ನು ಡೌನ್-ಲೋಡ್ ಮಾಡಿಕೊಂಡು ಕರೆಪತ್ರದಲ್ಲಿ ನಮೂದಿಸಿರುವ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ನಿಗಧಿತ ದಿನಾಂಕದಂದು ದಾಖಲಾತಿ / ದೇಹದಾರ್ಡ್ಯತೆ ಪರಿಶೀಲನೆಗೆ ತಪ್ಪದೇ ಹಾಜರಾಗಬೇಕೆಂದು ನಿಗಮ ಸೂಚಿಸಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಾತ್ಕಾಲಿಕ ಸಹಾಯವಾಣಿ ಆರಂಭಿಸಲಾಗಿದ್ದು, ದೂರವಾಣಿ ಸಂ.080 22221321-321, 7760990061, 7760990044 & 7760981930 ಸಂಖ್ಯೆಗಳಿಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದೆಂದು KSRTC ತಿಳಿಸಿದೆ.
ಇದೇ ವೇಳೆ, ಅಭ್ಯರ್ಥಿಗಳಿಗೆ ವೈಯಕ್ತಿಕ ಸಂದರ್ಶನ ಹಾಗೂ ಸಂದರ್ಶನಕ್ಕೆ ಅಂಕಗಳು ಇರುವುದಿಲ್ಲ. ನಿಗಧಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಶೇಕಡವಾರು ಅಂಕ ಹಾಗೂ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಮೆರಿಟ್ / ಮೀಸಲಾತಿ ನಿಯಮಗಳ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿರುವ KSRTC, ಈ ವಿಚಾರದಲ್ಲಿ ಯಾವುದೇ ಶಿಫಾರಸ್ಸು, ಪ್ರಭಾವ ಹಾಗೂ ಅಮಿಷ/ಅವ್ಯವಹಾರಗಳಿಗೆ ಒಳಗಾಗಬಾರದೆಂದು ಸಲಹೆ ಮಾಡಿದೆ.




























































