ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ನೂತನ ಪ್ರಾಂತ ಸಂಘಚಾಲಕರಾಗಿ ಶ್ರೀ ಜಿ.ಎಸ್. ಉಮಾಪತಿ ಕಾರ್ಯನಿರ್ವಹಿಸಲಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಆಡನೂರು ಮೂಲದ ಉಮಾಪತಿಯವರು ಇಂಜಿನಿಯರಿಂಗ್ ಪದವೀಧರರು. ದಾವಣಗೆರೆಯಲ್ಲಿ ಬಿ.ಇ. ಪದವಿ ಪೂರ್ಣಗೊಳಿಸಿದ ನಂತರ ನಂತರ ಮಂಗಳೂರಿನ ಎನ್.ಐ.ಟಿ.ಕೆ.ಯಲ್ಲಿ (ಕೆ.ಆರ್.ಇ.ಸಿ.) ಎಂ.ಇ. ಇನ್ ಸ್ಟ್ರಕ್ಚರ್ಸ್ ಹಾಗೂ ಕೋಲ್ಕತಾದಲ್ಲಿ ಎಂ.ಇ. ಇನ್ ಪಬ್ಲಿಕ್ ಹೆಲ್ತ್ ವ್ಯಾಸಂಗ ಪೂರೈಸಿದರು. ಕರ್ನಾಟಕ ಸರ್ಕಾರದ ಪಿ.ಡಬ್ಲ್ಯು.ಡಿ. ಇಲಾಖೆಯಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿಸೇವೆ ಸಲ್ಲಿಸಿ 2018ರಲ್ಲಿ ನಿವೃತ್ತರಾದರು.
ವಿದ್ಯಾರ್ಥಿ ದೆಸೆಯಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ನಂತರ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಬಳ್ಳಾರಿ ಜಿಲ್ಲೆಯ ಕಾರ್ಯವಾಹರಾಗಿ, ದಾವಣಗೆರೆ ಜಿಲ್ಲೆಯ ವ್ಯವಸ್ಥಾ ಪ್ರಮುಖರಾಗಿ, ದಾವಣಗೆರೆ ಜಿಲ್ಲಾ ಸಂಘಚಾಲಕರಾಗಿ, ಶಿವಮೊಗ್ಗ ವಿಭಾಗದ ವಿಭಾಗ ಸಂಘಚಾಲಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರಸ್ತುತ ಕರ್ನಾಟಕ ದಕ್ಷಿಣ ಪ್ರಾಂತದ ನೂತನ ಪ್ರಾಂತ ಸಂಘಚಾಲಕರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರು ಮಹಾನಗರದ ಸಂಘಚಾಲಕರಾಗಿ ಮಿಲಿಂದ್ ಗೋಖಲೆ ಹಾಗೂ ಮಂಗಳೂರು ವಿಭಾಗದ ವಿಭಾಗ ಸಂಘಚಾಲಕರಾಗಿ ಡಾ. ನಾರಾಯಣ ಶೆಣೈ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಕಟಣೆ ತಿಳಿಸಿದೆ.