ಬೆಂಗಳೂರು: ರಾಜ್ಯದಲ್ಲಿ ಬರ ಹಾಗೂ ಹಲವು ವಿಷಯಗಳ ಬಗ್ಗೆ ಹೆಚ್ಚಿನ ಚರ್ಚೆಯ ಅಗತ್ಯವಿದೆ. ಹಾಗಾಗಿ ವಿಧಾನಸಭಾ ಅಧಿವೇಶನವವನ್ನು ಒಂದು ವಾರ ವಿಸ್ತಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.
ಬೆಳಗಾವಿಯಲ್ಲಿ ಸುದ್ದಿಗಾರರೋಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್ ಅಶೋಕ್, ಸದನವನ್ನು ಇನ್ನೊಂದು ವಾರ ವಿಸ್ತರಿಸಲು ಕೋರಿದ್ದೇವೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಜನಪ್ರತಿನಿಧಿಗಳಿಗೆ ಅರ್ಧರ್ಧ ದಿನ ಅವಕಾಶ ಕೊಡಲು ಕೋರಿದ್ದೇವೆ ಎಂದು ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 50 ವರ್ಷ ಆಡಳಿತ ನಡೆಸಿದೆ. ಬಿಜೆಪಿ ಆಡಳಿತ ಇದ್ದುದು ಕೇವಲ 9 ವರ್ಷ. 50 ವರ್ಷಗಳಲ್ಲಿ ನೀರಾವರಿ ಯೋಜನೆಗೆ ಎಷ್ಟು ಮೊತ್ತ ಕೊಟ್ಟಿದ್ದಾರೆ? ಕೃಷ್ಣೆಯ ಕಣ್ಣೀರು ಎಂಬ ಪುಸ್ತಕವನ್ನು ಎಚ್.ಕೆ.ಪಾಟೀಲರು ಬಿಡುಗಡೆ ಮಾಡಿದ್ದಾರೆ. ಕೃಷ್ಣೆ ಕಣ್ಣೀರು ಸುರಿಸುತ್ತಲೇ ಇದ್ದಾಳೆ. ಕಾಂಗ್ರೆಸ್‍ನವರು ತುಪ್ಪ ತಿನ್ನುತ್ತಿದ್ದಾರೆ ಎಂದರು.
ಪ್ರತಿವರ್ಷ 10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರೂ ಕೊಡಲಿಲ್ಲ. ಮುಸ್ಲಿಮರಿಗೆ, ಮೌಲ್ವಿಗಳಿಗೆ 10 ಸಾವಿರ ಕೋಟಿ ಕೊಡುತ್ತಿದ್ದಾರೆ ಎಂದು ಟೀಕಿಸಿದರು. ಹಿಂದೂಗಳನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನೋಡುತ್ತಿದ್ದಾರೆ ಎಂದು ತಿಳಿಸಿದರು.
ಎಲ್ಲೆಡೆ ಬರ ಇದ್ದು, ರೈತರಿಗೆ ಎಕರೆಗೆ 25 ಸಾವಿರ ಕೊಡಬೇಕಿತ್ತು. 2 ಸಾವಿರವೂ ಇಲ್ಲ. ಅರ್ಧ ಎಕರೆಗೆ 500 ರೂ ಕೊಡುತ್ತಾರೆ. ಇದು ಕಟುಕರ ಸರಕಾರ. ಮೋಸದ ಸರಕಾರ; ಹಿಂದೂಗಳನ್ನು ದಮನ ಮಾಡುವ ಪ್ರಕ್ರಿಯೆ ಎಂದು ನುಡಿದರು.
ಯೇಸುವಿನ ಶಾಪದಿಂದ ಭೂಕಂಪ ಆಗಿದೆ ಎಂದಿದ್ದ ಸಚಿವರನ್ನು ಹಿಂದೆ ಎಸ್.ಎಂ.ಕೃಷ್ಣ ಅವರು ತಕ್ಷಣವೇ ಸಂಪುಟದಿಂದ ವಜಾ ಮಾಡಿದ್ದರು. ಕೇವಲ ಒಂದು ಗಂಟೆಯಲ್ಲಿ ಅವರನ್ನು ವಜಾ ಮಾಡಿದ್ದರು. ನಿಮ್ಮ ಸರಕಾರ ಹೀಗೆ ಮಾಡಿದೆಯೇ ಸಿದ್ದರಾಮಯ್ಯನವರೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಕಾಂಗ್ರೆಸ್ ಎಂ ಆಗಿದೆ ಎಂದ ಅವರು, ಸಂವಿಧಾನದ ಉಳಿವಿಗೆ ಹೋರಾಟ ಮುಂದುವರೆಸುತ್ತೇವೆ ಎಂದು ಪ್ರಕಟಿಸಿದರು. ಸಂವಿಧಾನ ಉಳಿಸಿ, ಸ್ಪೀಕರ್ ಸ್ಥಾನದ ಗೌರವ ಉಳಿಸಿ ಎಂದು ಆಗ್ರಹಿಸಿದರು. 2 ಕೋಟಿ ಹೆಚ್ಚು ಖರ್ಚಾದರೂ ಪರವಾಗಿಲ್ಲ; ಸದನದ ಅವಧಿ ವಿಸ್ತರಿಸಿ ಎಂದು ಆಗ್ರಹಿಸಿದರು.
ಜಮೀರ್ ಅಹ್ಮದ್ ಅವರ ಮಾತು ದುರಹಂಕಾರದ್ದು- ವಿಜಯೇಂದ್ರ
ಜಮೀರ್ ಅಹ್ಮದ್ ಅವರ ಪ್ರಕರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ಸಂವಿಧಾನ ಉಳಿಸಲು ಈ ಕ್ರಮ ಎಂದರು.
ಜಮೀರ್ ಅಹ್ಮದ್ ಅವರ ಮಾತು ದುರಹಂಕಾರದ್ದು. ಅವರ ಹೇಳಿಕೆಯ ಅರ್ಥ ಅವರಿಗೂ ಗೊತ್ತಿದೆ. ನಮಗೂ ಗೊತ್ತಿದೆ. ಜಮೀರ್ ಅಹ್ಮದ್ ಅವರ ಹೇಳಕೆ ಬಂದ 24 ಗಂಟೆಗಳಲ್ಲಿ ಅವರ ರಾಜೀನಾಮೆ ಪಡೆಯುವ ನಿರೀಕ್ಷೆ ಇತ್ತು. ಆದರೆ, ಅದಾಗಲಿಲ್ಲ. ಗೌರವಾನ್ವಿತ ಸಭಾಧ್ಯಕ್ಷರೂ ಗಟ್ಟಿ ನಿರ್ಧಾರ ಮಾಡಲಿಲ್ಲ. ಹಾಗಾಗಿ ಬಿಜೆಪಿ ಮತ್ತು ಜೆಡಿಎಸ್ ಜೊತೆಯಾಗಿ ಜಮೀರ್ ಅಹ್ಮದ್ ಅವರ ಹೇಳಿಕೆ ಖಂಡಿಸಿ ಸತ್ಯಾಗ್ರಹ ಮಾಡುತ್ತಿವೆ ಎಂದು ವಿವರಿಸಿದರು. ತಮ್ಮ ಹೇಳಿಕೆ ತಪ್ಪು ಎಂದು ಜಮೀರ್ ಅಹ್ಮದ್ ಅವರಿಗೆ ಅನಿಸದೇ ಇರುವುದು ದುರದೃಷ್ಟಕರ ಎಂದು ತಿಳಿಸಿದರು.





















































